ಬೆಂಗಳೂರು: ಹಾಸನ ಅಭಿವೃದ್ಧಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆದೇಶವೊಂದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಮಂಜೂರಾಗಿದ್ದ ಯೋಜನೆಗಳನ್ನು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಗೆತನ ಹಾಗೂ ವೈಯಕ್ತಿಕ ದ್ವೇಷ ಸಾಧನೆ ಮಾಡುತ್ತ ಕಾಮಗಾರಿಗಳಿಗೆ ತಡೆ ನೀಡಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಆರೋಪಿಸಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜನವರಿ 25, 2021 ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದ ಎದುರು ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರೊಂದಿಗೆ ಧರಣಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದರು.
ಆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಧಿಕೃತವಾಗಿ ಪತ್ರವನ್ನೂ ನೀಡಿದ್ದರು. ಪ್ರಮುಖವಾಗಿ ಹಾಸನದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಯೋಜನೆಗೆ ಸಿಎಂ ಯಡಿಯೂರಪ್ಪ ಅವರು ತಡೆ ನೀಡಿದ್ದಾರೆಂದು ಆರೋಪಿಸಿದ್ದರು.
ಜೆಡಿಎಸ್ ಒತ್ತಡಕ್ಕೆ ಮಣಿದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಭಟನೆ ಮಾಡದಂತೆ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದರು. ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನೂ ಕೊಟ್ಟಿದ್ದರು. ಆದರೆ ಇದೀಗ ಸಿಎಂ ಯಡಿಯೂರಪ್ಪ ಅವರು ಮತ್ತೊಂದು ಆದೇಶವನ್ನು ಮಾಡಿದ್ದು, ಆ ಆದೇಶ ತೀವ್ರ ಕುತೂಹಲ ಮೂಡಿಸಿದೆ.
ಯಡಿಯೂರಪ್ಪ ಮೇಲೆ ಜೆಡಿಎಸ್ ಆರೋಪ.
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಮಂಜೂರಾಗಿದ್ದ ಯೋಜನೆಗಳಿಗೆ ತಡೆ ಒಡ್ಡಿದ ಆರೋಪವನ್ನು ಸಿಎಂ ಯಡಿಯೂರಪ್ಪ ಅವರ ಮೇಲೆ ಜೆಡಿಎಸ್ ಮಾಡಿತ್ತು. ಒಟ್ಟು 10 ಕಾಮಗಾರಿಗಳಿಗೆ ಸಿಎಂ ಯಡಿಯೂರಪ್ಪ ಅವರು ದ್ವೇಷ ರಾಜಕಾರಣದ ಮೂಲಕ ತಡೆ ಹಾಕಿದ್ದಾರೆಂದು ಆರೋಪಿಸಿ ಪತ್ರ ಬರೆದಿದ್ದರು.
ಹಾಸನದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ತಡೆಹಿಡಿದಿದ್ದನ್ನು ಪ್ರಮುಖವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು. ಉಳಿದಂತೆ ಹಾಸನ ಜಿಲ್ಲೆಯಲ್ಲಿ ಬಂಧಿಖಾನೆ, ರೈಲು ಮಾರ್ಗ, ರಸ್ತೆ ಸೇರಿದಂತೆ ಹಲವು ಕಾಮಗಾರಿಗಳನ್ನು ಉಲ್ಲೇಖಿಸಿದ್ದರು.
ಜೆಡಿಎಸ್‌ಗೆ ಯಡಿಯೂರಪ್ಪ ಭರವಸೆ
ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಕಾಮಗಾರಿಗಳು ಸರಿಯಾಗಿ ನಡೆದಿರಲಿಲ್ಲ. ಆರ್ಥಿಕ ಸಂಕಷ್ಟವಿದ್ದರೂ ಯಾವುದೇ ಇಲಾಖೆಯ ಯೋಜನೆಗಳನ್ನು ತಡೆಹಿಡಿದಿಲ್ಲ. ಇದೀಗ ಕೋವಿಡ್ ಸಂಕಷ್ಟದಿಂದ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದು, ಹಂತಹಂತವಾಗಿ ಎಲ್ಲ ಯೋಜನೆಗಳಿಗೆ ಆರ್ಥಿಕ ಅನುದಾನ ಬಿಡುಗಡೆ ಮಾಡಲಾಗುವುದು.
ನೀವು ಪತ್ರದಲ್ಲಿ ಉಲ್ಲೇಖಿಸಿರುವ ಎಲ್ಲ ಕಾಮಗಾರಿಗಳಿಗೆ ಹಂತಹಂತವಾಗಿ ಅನುದಾನ ಬಿಡುಗಡೆ ಮಾಡುತ್ತೇವೆ. ಹೀಗಾಗಿ ತಾವು ತಮ್ಮ ಧರಣಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಸ್ವತಃ ಸಿಎಂ ಯಡಿಯೂರಪ್ಪ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಜನವರಿ 22, 2021ರಂದು ಪತ್ರ ಬರೆದು ಭರವಸೆ ನೀಡಿದ್ದರು. ಹೀಗಾಗಿ ಜೆಡಿಎಸ್ ಶಾಸಕರು ತಮ್ಮ ಧರಣಿಯನ್ನು ಹಿಂದಕ್ಕೆ ಪಡೆದಿದ್ದರು.
ವರಸೆ ಬದಲಾಯಿಸಿದ ಯಡಿಯೂರಪ್ಪ?
ಇದೀಗ ಸಿಎಂ ಯಡಿಯೂರಪ್ಪ ಅವರು ತಮ್ಮ ವರಸೆ ಬದಲಿಸಿರುವುದು ಬಹಿರಂಗವಾಗಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿರುವ ಶ್ರೇಯಸ್ಸು ಜೆಡಿಎಸ್‌ಗೆ ಹೋಗದಂತೆ ಸಿಎಂ ಯಡಿಯೂರಪ್ಪ ಅವರು ರಾಜಕೀಯ ತಂತ್ರ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಯಾಕೆಂದರೆ ಜನವರಿ 25, 2021 ರಂದು ಹಾಸನ ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರು ಬರೆದಿದ್ದ ಪತ್ರಕ್ಕೆ ಟಿಪ್ಪಣಿ ಬರೆದಿರುವ ಸಿಎಂ ಯಡಿಯೂರಪ್ಪ ಅವರು, ಹಾಸನದ ಬೂವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಕೈಗೆತ್ತಿಕೊಂಡು ತ್ವರಿತವಾಗಿ ಮುಗಿಸಲಾಗುವುದು ಎಂದು ಶಾಸಕ ಪ್ರೀತಮ್ ಗೌಡ ಅವರಿಗೆ ಲಿಖಿತ ಭರವಸೆ ನೀಡಿದ್ದಾರೆ.
ಆ ಮೂಲಕ ಜೆಡಿಎಸ್‌ನಿಂದಾಗಿಯೆ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಯಿತು ಎಂಬ ಕ್ರೆಡಿಟ್ ಹೋಗದಂತೆ ಸಿಎಂ ಮುಂದಾಲೋಚವನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಸಿಎಂ ಭರವಸೆ ಕೊಟ್ಟಿದ್ದರೂ, ಸರ್ಕಾರಿ ದಾಖಲೆಗಳಲ್ಲಿ ಹಾಸನ ಶಾಸಕ ಪ್ರೀತಮ್ ಗೌಡ ಅವರ ಮನವಿಯಂತೆ ವಿಮಾನ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂಬಂತಾಗಿದೆ.
ಈಗ ಬಿಜೆಪಿ-ಜೆಡಿಎಸ್ ಭಾಯಿ ಭಾಯಿ…!!!
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇದೀಗ ಬಿಜೆಪಿ-ಜೆಡಿಎಸ್ ಮತ್ತೆ ಭಾಯಿ ಭಾಯಿ ಆಗಿವೆ. ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಎರಡೂ ಪಕ್ಷಗಳು 15 ವರ್ಷಗಳ ಬಳಿಕ (2006ರಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆಗಿತ್ತು) ಮತ್ತೊಮ್ಮೆ ಮೈತ್ರಿ ಮಾಡಿಕೊಂಡಿವೆ. ಮುಂದಿನ ಒಂದೂವರೆ ವರ್ಷಗಳ ಅವಧಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಒಪ್ಪಿಕೊಂಡಿದೆ. ಆ ಮೂಲಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರವಿಡುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.
ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಒಂದಾದರೆ, ಇಲ್ಲಿ ಸಿಎಂ ಯಡಿಯೂರಪ್ಪ ಅವರ ಲೆಕ್ಕಾಚಾರವೇ ಬೇರೆಯಿದೆ. ವಿಧಾನಸಭೆಯಲ್ಲಿ ಬಹುಮತವಿದ್ದರೂ ವಿಧಾನಪರಿಷತ್‌ನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಮುಂದಿನ ಒಂದೂವರೆ ವರ್ಷಗಳ ಕಾಲ ಬಹುಮತ ಸಿಗುವ ಸಾಧ್ಯತೆಗಳು ಇಲ್ಲ. ಹೀಗಾಗಿ ಸರ್ಕಾರಕ್ಕೆ ಮುಖಭಂಗವಾದಂತೆ ಪರಿಷತ್‌ನಲ್ಲಿ ಬಿಲ್‌ಗಳನ್ನು ಪಾಸ್ ಮಾಡಿಕೊಳ್ಳುವುದು ಸಿಎಂ ಯಡಿಯೂರಪ್ಪ ಅವರ ಲೆಕ್ಕಾಚಾರ.
ಈ ಮಧ್ಯೆ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪತ್ರ ಇದೀಗ ಬಹಿರಂಗವಾಗಿರುವುದು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕಿಗೆ ಕಾರಣವಾಗಬಹುದಾ? ಎಂಬ ಕುತೂಹಲ ಕೂಡ ಸೃಷ್ಟಿಯಾಗಿದೆ.