ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ತಮ್ಮ ಪಕ್ಷದ ನಾಯಕರಿಗಾಗಿ ಭೋಜನಕೂಟ ಆಯೋಜಿಸಿದ್ದಾರೆ. ಸಚಿವರು, ಶಾಸಕರು ಹಾಗೂ ಬಿಜೆಪಿಯ ಪರಿಷತ್ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ.
ಪಕ್ಷ ಹಾಗೂ ಸರ್ಕಾರದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಬಿಜೆಪಿಯ ಪಕ್ಷ ನಿಷ್ಠ ಶಾಸಕರು ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸುವ ಬದಲು ಸಿಎಂ ಸರ್ಕಾರಿ ನಿವಾಸದಲ್ಲಿ ನಡೆಯುವ ಭೋಜನ ಕೂಟ ಸಾಕಷ್ಟು ಕುತೂಹಲ ಮೂಡಿಸಿದೆ. ಸಚಿವರು ಹಾಗೂ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಯಡಿಯೂರಪ್ಪ ಈ ಭೋಜನಕೂಟ ಆಯೋಜಿಸಿದ್ದಾರೆ ಎನ್ನಲಾಗಿದೆ.
ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್ ಅವರ ಕಚೇರಿಯಲ್ಲಿ ಭೋಜನದ ಜೊತೆ ಅನೌಪಚಾರಿಕ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಜಿ.ಎಚ್.ತಿಪ್ಪಾರೆಡ್ಡಿ, ಸಿದ್ದು ಸವದಿ, ಅಪ್ಪಚ್ಚು ರಂಜನ್ ಸೇರಿದಂತೆ 15 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.
ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದಿರುವುದರಿಂದ ಮುನಿಸಿಕೊಂಡಿರುವ ಶಾಸಕರನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಭೋಜನ ಕೂಟ ಏರ್ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.