Monday, October 2, 2023
HomeUncategorizedಯಡಿಯೂರಪ್ಪ ಬಹುತೇಕ ಏಕಾಂಗಿ?!

ಯಡಿಯೂರಪ್ಪ ಬಹುತೇಕ ಏಕಾಂಗಿ?!

- Advertisement -



Renault

Renault
Renault

- Advertisement -

ಬೆಂಗಳೂರು,ಫೆ.4– ಶಾಸಕರ ಅಸಮಾಧಾನಕ್ಕೆ ಗುರಿಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಮಂಡಲದ ಅಧಿವೇಶನದಲ್ಲಿ ಅಕ್ಷರಶಃ ಏಕಾಂಗಿಯಾಗಿದ್ದಾರೆ. ಏಕೆಂದರೆ ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಐದು ದಿನಗಳಿಂದ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಮುಗಿಬಿದ್ದರೂ ಅವರನ್ನು ಸಚಿವರಾಗಲಿ ಇಲ್ಲವೇ ಶಾಸಕರಾಗಲಿ ಸಮರ್ಥಿಸಿಕೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ.

ನಿನ್ನೆ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಸದನದಲ್ಲಿ ಬಿಡಿಸಿಟ್ಟರು. ಒಂದು ಹಂತದಲ್ಲಿ ಯಡಿಯೂರಪ್ಪನವರಿಗೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನಡೆಯಾಗಿರುವುದನ್ನು ಸಹ ಪ್ರಸ್ತಾಪಿಸಿ ಇಕ್ಕಟ್ಟಿಗೆ ಸಿಲುಕಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಬಿಟ್ಟರೆ ಮುಖ್ಯಮಂತ್ರಿ ಪರವಾಗಿ ಯಾರೊಬ್ಬರೂ ಕೂಡ ಮಾತನಾಡದೆ ಮೂಕ ಪ್ರೇಕ್ಷಕರಂತೆ ಸದನ ವೀಕ್ಷಿಸುತ್ತಿದ್ದರು. ಅನಿವಾರ್ಯವಾಗಿ ಬೊಮ್ಮಾಯಿ ಹೊರತುಪಡಿಸಿದರೆ ಉಳಿದ ಸಚಿವರು ಹಾಗೂ ಶಾಸಕರು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಮುಗುಮ್ಮಾಗಿದ್ದರು.

ಈ ಹಿಂದೆ ಕಲಾಪದ ವೇಳೆ ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ಅದಕ್ಕೆ ಅಷ್ಟೇ ತೀಕ್ಷ್ಣವಾಗಿ ಆಡಳಿತ ಪಕ್ಷದಿಂದಲೂ ವಿರೋಧ ವ್ಯಕ್ತವಾಗುತ್ತಿತ್ತು. ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿದ್ದ ಟೀಕೆಗಳಿಗೆ ಅಡ್ಡಗೋಡೆಯಾಗಿ ಕೆಲ ಶಾಸಕರು ನಿಲ್ಲುತ್ತಿದ್ದರು.

ಪ್ರತಿ ಬಾರಿಯೂ ವಿರೋಧ ಪಕ್ಷಗಳ ಟೀಕೆಗಳಿಗೆ ತಕ್ಕ ಉತ್ತರ ಕೊಡುತ್ತಾ ಸರ್ಕಾರಕ್ಕೆ ತಡೆಗೋಡೆಯಾಗಿ ನಿಲ್ಲುತ್ತಿದ್ದ ಸಚಿವ ಮಾಧುಸ್ವಾಮಿ, ಈ ಬಾರಿ ಏನೇ ಟೀಕೆಗಳು ಬಂದರೂ ಕೇಳಿಸಿದರೂ ಕೇಳದಂತೆ ಮೌನವಾಗಿದ್ದರು. ಒಂದು ಹಂತದಲ್ಲಿ ಸಿದ್ದರಾಮಯ್ಯನವರೇ ಕೆಣಕುವ ಪ್ರಯತ್ನ ಮಾಡಿದರೂ ಕೂಡ ಮಾಧುಸ್ವಾಮಿ ಬಾಯಿ ಬಿಡಲೇ ಇಲ್ಲ.

ಇನ್ನು ಯಡಿಯೂರಪ್ಪನವರ ಮಾನಸ ಪುತ್ರ ಎಂದೇ ಕರೆಯುತ್ತಿದ್ದ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ರಾಜುಗೌಡ ನಾಯಕ್, ಮಾಡಾಳು ವಿರೂಪಾಕ್ಷಪ್ಪ, ಹರತಾಳ್ ಹಾಲಪ್ಪ, ಅರಗ ಜ್ಞಾನೇಂದ್ರ ಸೇರಿದಂತೆ ಬಹುತೇಕ ಆಪ್ತ ವಲಯದವರು ಕೂಡ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.

ಬಿಜೆಪಿಯಲ್ಲಿ ಈಗ ಬಿಎಸ್‍ವೈ ಅವರ ಮೇಲಿದ್ದ ಭಯ ಶಾಸಕ, ಸಚಿವರಿಗೆ ಇಲ್ಲ. ಯಡಿಯೂರಪ್ಪ ಅವರ ಕೆಲವೊಂದು ಆತುರದ ನಿರ್ಧಾರಗಳಿಂದಾಗಿ ಬಹುತೇಕ ಸಚಿವರು, ಶಾಸಕರು ಮುನಿಸಿಕೊಂಡಿದ್ದಾರೆ. ಈ ಹಿಂದೆ ಇದ್ದ ಬಿಎಸ್‍ವೈ ಆಪ್ತರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಕಡಿಮೆ ಆಗುತ್ತಿದೆ ಎಂಬ ಪ್ರಶ್ನೆ ಎದುರಾಗಿದೆ.

ಈ ಹಿಂದಿನ ಅವೇಶನಗಳಲ್ಲಿ ಬಿಎಸ್‍ವೈ ಆಪ್ತರು ಯಾವುದೇ ಸಮಯದಲ್ಲಾಗಲಿ ಬೆನ್ನಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಇದೀಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈ ಬೆಳವಣಿಗೆಗಳ ನಡುವೆಯೇ ನಾಳೆ ವಿಧಾನಸಭೆಯ ಕಲಾಪ ಮುಗಿದ ನಂತರ ಸಂಘನಿಷ್ಠೆಯ ಕೆಲವು ಶಾಸಕರು ಮತ್ತೊಮ್ಮೆ ಸಭೆ ನಡೆಸಲು ಮುಂದಾಗಿರುವುದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ.

ಈಗಾಗಲೇ ಸಿಎಂ ನಡೆ, ಏಕಪಕ್ಷೀಯ ನಿರ್ಧಾರ ಮತ್ತು ಆಡಳಿತದ ಬಗ್ಗೆ ಬೇಸರ ವ್ಯಕಪ್ತಪಡಿಸಿರುವ ಸುಮಾರು 15ಕ್ಕೂ ಶಾಸಕರು ಸೋಮವಾರ ಊಟದ ನೆಪದಲ್ಲಿ ಒಂದೆಡೆ ಸೇರಿ ಸಭೆ ನಡೆಸಿದ್ದರು. ಕಲಾಪ ಮುಗಿದ ಬಳಿಕ ಅಂದ್ರೆ ಶುಕ್ರವಾರ ಸಭೆ ಸೇರುವ ಬಗ್ಗೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಇದೀಗ ನಾಳೆ 15ಕ್ಕೂ ಹೆಚ್ಚು ಶಾಸಕರು ಮತ್ತೆ ಸೇರಲಿದ್ದಾರೆ ಎಂಬ ವದಂತಿಗಳು ಕೇಳಿಬಂದಿವೆ.

ಸಭೆಯಲ್ಲಿ ಸಿಎಂ ವಿರುದ್ಧ ಹೈಕಮಾಂಡ್ ಗೆ ದೂರು ಸಲ್ಲಿಸುವ ಕುರಿತು ಚರ್ಚೆಗಳು ನಡೆಸಿ, ಒಮ್ಮತದ ತೀರ್ಮಾನಕ್ಕೆ ನಿಷ್ಠರು ಬರಲಿದ್ದಾರೆ. ಹಾಗಾಗಿ ಶುಕ್ರವಾರ ಸಿಎಂಗೆ ಸಂಕಟ ತಂದೊಡ್ಡುತ್ತಾ ಅಥವಾ ಅಸಮಾಧಾನ ಸೋಟಕ್ಕೂ ಮುನ್ನವೇ ಮುಖ್ಯಮಂತ್ರಿಗಳು ಅದನ್ನು ಶಮನ ಮಾಡುತ್ತಾರೆಯೇ ಎಂಬ ಮೂಲಭೂತ ಪ್ರಶ್ನೆ ಎದುರಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments