ದಾವಣಗೆರೆ: ಬಿಎಸ್‌ವೈಗೆ ಕುರ್ಚಿ ಅಲುಗಾಡಲು ಶುರುವಾದ್ರಷ್ಟೆ ವೀರಶೈವ ಲಿಂಗಾಯತರು ನೆನಪಾಗುತ್ತಾರೆ ಎಂದು ಜಿಲ್ಲೆಯ ಹರಿಹರ ನಗರದಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಬಹಿರಂಗ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಬಹಿರಂಗ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನನಗೆ ಯಾವುದೇ ಸಚಿವ ಸ್ಥಾನ ಬೇಕಾಗಿಲ್ಲ. ಪಂಚಮಸಾಲಿಗಳಿಗೆ ಮೀಸಲಾತಿ ನೀಡದಿದ್ದರೆ ಕುರ್ಚಿ ಇರಲ್ಲ. ನಾನು ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ. ಯಡಿಯೂರಪ್ಪ ಅವರ ಆ ಸ್ಥಾನಕ್ಕೆ ನಾನೇ ಹೋಗುತ್ತೇನೆ. ಲಿಂಗಾಯತರು ಕಡಿಮೆ ಸಂಖ್ಯೆಯಲ್ಲಿದ್ದರೂ ಉತ್ತಮ ಖಾತೆ ನೀಡಿದ್ದಾರೆ.
ಆದ್ರೆ ಬಹುಸಂಖ್ಯಾತರಾದ ಪಂಚಮಸಾಲಿಗಳಿಗೆ ಸಿಗಬೇಕಾದ ಸಚಿವ ಸ್ಥಾನ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನನ್ನನ್ನು ಮುಗಿಸುವುದಾಗಿ ಹೇಳಿದ್ದಾರೆ, ನಿನ್ನ ಬಗ್ಗೆ ನೀ ನೋಡು. ಸ್ವಲ್ಪ ದಿನದಲ್ಲಿ ನೀ ಬೆಂಗಳೂರಿನಲ್ಲಿ ಇರುತ್ತೀಯೋ, ಪರಪ್ಪನ ಅಗ್ರಹಾರದಲ್ಲಿರುತ್ತೀಯೋ ನೋಡು ಎಂದು ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.