ಮಂಗಳೂರು: ಕಾಸರಗೋಡಿನಲ್ಲಿ ನಡೆಯಲಿರುವ ಬಿಜೆಪಿಯ ವಿಜಯ ಯಾತ್ರೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರು ಏರ್ ಪೋರ್ಟ್ ಗೆ ಬಂದಿಳಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕರಾವಳಿಯ ಬಿಜೆಪಿ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದು, ಸ್ವಾಗತಿಸಿದರು. ತದನಂತರ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಯೋಗಿ ಆದಿತ್ಯನಾಥ್ ಕೇರಳದ ಕಾಸರಗೋಡಿಗೆ ರಸ್ತೆ ಮೂಲಕ ತೆರಳಿದರು.
ಕಾಸರಗೋಡಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶವನ್ನು ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ.
ಕೇರಳ ಬಿಜೆಪಿ ನಾಯಕ ಕೆ. ಸುರೇಂದ್ರನ್ ವಿಜಯ ಯಾತ್ರೆಯ ನೇತೃತ್ವ ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಜಯ ಯಾತ್ರೆಯ ಅಂಗವಾಗಿ ಬಿಜೆಪಿ 14 ರ್ಯಾಲಿಗಳನ್ನು ಮತ್ತು 80ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿದೆ. ಮಾರ್ಚ್ 7ರಂದು ಕೇರಳ ರಾಜಧಾನಿ ತಿರುವನಂತಪುರದಲ್ಲಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ.