Saturday, September 30, 2023
HomeUncategorizedಉಪಚುನಾವಣೆ ಕುಸ್ತಿಗೆ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ರೆಡಿ

ಉಪಚುನಾವಣೆ ಕುಸ್ತಿಗೆ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ರೆಡಿ

- Advertisement -



Renault

Renault
Renault

- Advertisement -

ಬೆಂಗಳೂರು, ಫೆ.12- ಮುಂದಿನ ದಿನಗಳಲ್ಲಿ ನಡೆಯುವ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದವಾಗಿಟ್ಟುಕೊಂಡಿದ್ದು, ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಖಾಡಕ್ಕಿಳಿಯಲು ಸಜ್ಜುಗೊಂಡಿದೆ.

ಬೆಳಗಾವಿ ಲೋಕಸಭೆ ಕ್ಷೇತ್ರ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ ಸುಮಾರು ನಾಲ್ಕು ಅವಗಳಿಂದಲೂ ಕಾಂಗ್ರೆಸ್‍ನ ಕೈ ತಪ್ಪಿ ಹೋಗಿದೆ. ಈ ಬಾರಿ ಹೇಗಾದರೂ ಮಾಡಿ ಅದನ್ನು ಮರುವಶ ಮಾಡಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ.

ಸತೀಶ್ ಜಾರಕಿಹೊಳಿ ಅವರು ಕೂಡ ತಮ್ಮ ಯಮಕನಮರಡಿ ಕ್ಷೇತ್ರವನ್ನು ಮಕ್ಕಳಿಗೆ ಬಿಟ್ಟುಕೊಟ್ಟು ತಾವು ರಾಷ್ಟ್ರ ರಾಜಕಾರಣದತ್ತ ಗಮನ ಹರಿಸಲು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಪಕ್ಷ ಅವಕಾಶ ನೀಡಿದರೆ ಬೆಳಗಾವಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧರಿದ್ದಾರೆ.

ಮತ್ತೊಂದೆಡೆ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಇವರಿಗೆ ಅವರಾಡಿದ ಮಾತುಗಳೇ ಅಡ್ಡಲಾಗಿ ನಿಂತಿವೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಆ ಸಂದರ್ಭದಲ್ಲಿ ಸಂತಾಪ ಸೂಚಿಸಲು ಸುರೇಶ್ ಅಂಗಡಿ ಮನೆಗೆ ಹೋಗಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದ ಪ್ರಕಾಶ್ ಹುಕ್ಕೇರಿ ಅವರು, ಬಿಜೆಪಿ ಸುರೇಶ್ ಅಂಗಡಿ ಅವರ ಪತ್ನಿಗೆ ಲೋಕಸಭೆ ಚುನಾವಣೆಯಲ್ಲಿ ಸ್ರ್ಪಸಲು ಟಿಕೆಟ್ ನೀಡಿದರೆ ತಾವು ಪಕ್ಷವನ್ನೂ ಲೆಕ್ಕಿಸದೆ ಬಿಜೆಪಿ ಪರವಾಗಿ ಕೆಲಸ ಮಾಡುವುದಾಗಿ ಹೇಳಿಕೆ ನೀಡಿದ್ದರು.

ಇದು ಹೈಕಮಾಂಡ್‍ನ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಸ್ರ್ಪಸಲು ಟಿಕೆಟ್ ಕೇಳುತ್ತಿದ್ದರಾದರೂ ಕಾಂಗ್ರೆಸ್ ಹುಕ್ಕೇರಿಯವರ ಹೆಸರನ್ನು ಪರಿಗಣಿಸದಿರಲು ನಿರ್ಧರಿಸಿದೆ ಎನ್ನಲಾಗಿದೆ.
ಈ ಮಧ್ಯೆ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜು ಹುಳಿಹಟ್ಟಿ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.

ಬೆಳಗಾವಿಯಲ್ಲಿ ಲಿಂಗಾಯಿತ ಸಮುದಾಯ ಪ್ರಬಲವಾಗಿದ್ದು, ಚನ್ನರಾಜು ಅವರನ್ನು ಕಣಕ್ಕಿಳಿಸಿದರೆ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದ ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಅಂದಾಜು ಕಾಂಗ್ರೆಸ್‍ನಲ್ಲಿದೆ.

ಬಸವಕಲ್ಯಾಣದಲ್ಲಿ ಶಾಸಕರಾಗಿದ್ದ ನಾರಾಯಣರಾವ್ ಅವರ ಸಾವಿನಿಂದ ತೆರವಾಗಿರುವ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ವಿಜಯ್‍ಸಿಂಗ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಚರ್ಚೆಗಳು ಹೆಚ್ಚಾಗಿವೆ. ಒಂದು ವೇಳೆ ಮಲ್ಲಮ್ಮ ಮತ್ತು ವಿಜಯ್‍ಸಿಂಗ್ ಅವರನ್ನು ಹೊರತುಪಡಿಸಿದರೆ ಅಭ್ಯರ್ಥಿಗಳಾಗಲು ಹತ್ತಾರು ಮಂದಿ ಪ್ರಬಲ ಲಾಬಿ ಮಾಡುತ್ತಿದ್ದಾರೆ.

ಮಸ್ಕಿ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ರ್ಪಸಿದ್ದ ಬಸವನಗೌಡ ತುರವಿಹಾಳ್ ಅವರು ಈಗ ಕಾಂಗ್ರೆಸ್‍ಗೆ ಬಂದಿದ್ದು, ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋಗಿರುವ ಪ್ರತಾಪ್‍ಗೌಡ ಪಾಟೀಲ್ ವಿರುದ್ಧ ಹೋರಾಟಕ್ಕೆ ಸಜ್ಜುಗೊಂಡಿದ್ದಾರೆ. ಮೂರು ಕ್ಷೇತ್ರಗಳ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಭಾರೀ ತಯಾರಿಗಳನ್ನು ನಡೆಸುತ್ತಿವೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments