Friday, October 7, 2022
Homeರಾಜಕೀಯಮತ್ತೆ ಸಿದ್ದರಾಮಯ್ಯ 'ಕೈ' ಬಲ: ಮೊದಲ 'ಅಹಿಂದ ಸಮಾವೇಶ'ಕ್ಕೆ ಮುಹೂರ್ತ ಫಿಕ್ಸ್…!!!

ಮತ್ತೆ ಸಿದ್ದರಾಮಯ್ಯ ‘ಕೈ’ ಬಲ: ಮೊದಲ ‘ಅಹಿಂದ ಸಮಾವೇಶ’ಕ್ಕೆ ಮುಹೂರ್ತ ಫಿಕ್ಸ್…!!!

- Advertisement -
Renault

Renault

Renault

- Advertisement -

ಬೆಂಗಳೂರು: ಅಹಿಂದ ಸಂಘಟನೆ ಮಾಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೈಕಮಾಂಡ್‌ನಿಂದ ಒಪ್ಪಿಗೆ ಪಡೆಯುವ ಮೂಲಕ ರಾಜ್ಯ ಕಾಂಗ್ರೆಸ್‌ ಪಕ್ಷದ ಪ್ರಶ್ನಾತೀತ ನಾಯಕ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅಹಿಂದ ಸಂಘಟನೆ ಹಾಗೂ ಸಮಾವೇಶ ಮಾಡಲು ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿನ ಬಹುತೇಕ ನಾಯಕರು ಅಡ್ಡಗಾಲು ಹಾಕಿದ್ದರು. ಯಾವುದೇ ಕಾರಣಕ್ಕೂ ಅಹಿಂದ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಹಿಂದುಳಿದ ವರ್ಗಕ್ಕೆ ಮಾತ್ರ ಸಿಮೀತಗೊಳಿಸಲು ಅವಕಾಶ ಕೊಡಬಾರದು ಎಂದು ಹೈಕಮಾಂಡ್ ಎದುರು ಬೇಡಿಕೆ ಇಟ್ಟಿದ್ದರು.

ಆದರೆ ಹೈಕಮಾಂಡ್ ಭೇಟಿ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಹಿಂದ ಸಮಾವೇಶ ನಡೆಸಲು ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಪ್ರಬಲರಾಗುತ್ತಾರೆ ಎಂದೇ ಅಹಿಂದ ಬೇಡ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್‌ಗೆ ಒತ್ತಾಯಿಸಿದ್ದರು. ಆದರೆ ಮಾಸ್ ಲೀಡರ್ ಸಿದ್ದರಾಮಯ್ಯ ಅವರ ಸಲಹೆಯನ್ನು ಒಪ್ಪದೆ ಇರಲು ಕಾಂಗ್ರೆಸ್ ಹೈಕಮಾಂಡ್ ಬಳಿ ಕಾರಣಗಳೇ ಇರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಸಿದ್ದರಾಮಯ್ಯ ಅವರು ಅಹಿಂದ ಸಂಘಟನೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಕೊಟ್ಟಿದೆ.

ಅಹಿಂದ ಸಮಾವೇಶಗಳನ್ನು ನಡೆಸಲು ಸಿದ್ದರಾಮಯ್ಯ ಅವರಿಗೆ ಒಪ್ಪಿಗೆ ಹೈಕಮಾಂಡ್, ಕೆಲವು ಕರಾರುಗಳನ್ನೂ ಹಾಕಿದೆ. ಹೈಕಮಾಂಡ್ ಹಾಕಿರುವ ಶರತ್ತುಗಳೇನು? ಅಹಿಂದ ಸಂಘಟನೆಗೆ ಹೈಕಮಾಂಡ್‌ನ್ನು ಸಿದ್ದರಾಮಯ್ಯ ಒಪ್ಪಿಸಿದ್ದು ಹೇಗೆ? ಮುಂದಿದೆ ಸಂಪೂರ್ಣ ಮಾಹಿತಿ!

ಕಲ್ಯಾಣ ಕರ್ನಾಟದಲ್ಲಿ ಮೊದಲ ಸಮಾವೇಶ

ಕಲ್ಯಾಣ ಕರ್ನಾಟಕದಲ್ಲಿ ಅಹಿಂದ ಸಮಾವೇಶದ ಮೊದಲ ವೇದಿಕೆ ಸಿದ್ದರಾಮಯ್ಯ ಅವರಿಗೆ ಸಿದ್ಧವಾಗಿದೆ. ಮಾರ್ಚ್‌ 13 ರಂದು ಕಲಬುರಗಿಯಲ್ಲಿ ಮೊದಲ ಅಹಿಂದ ಸಮಾವೇಶ ನಡೆಯಲಿದೆ. ಕುರುಬ ಸಂಘಟನೆಯೊಂದು ಸಮಾವೇಶ ಏರ್ಪಡಿಸಲಿದ್ದು, ಅದರಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸುವ ಮೂಲಕ ಮತ್ತೊಮ್ಮೆ ಅಹಿಂದ ಸಮಾವೇಶದ ಮೂಲಕ ಸಂಘಟನೆಗೆ ಮುಂದಾಗಲಿದ್ದಾರೆ. ಇಡೀ ರಾಜ್ಯಾದ್ಯಂತ ಸಮಾವೇಶಗಳು ಮುಂದಿನ ವಿಧಾನಸಭಾ ಚುನಾವಣೆವೆರೆಗೆ ನಡೆಯಲಿವೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ನೋ ‘ಅಹಿಂದ’ ಎಂದಿದ್ದ ಹೈಕಮಾಂಡ್!

ರಾಜ್ಯದಲ್ಲಿ ಶೀಘ್ರದಲ್ಲಿ 3 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಉಪ ಚುನಾವಣೆ ನಡೆಯಬೇಕಿರುವ ನಾಲ್ಕೂ ಕ್ಷೇತ್ರಗಳಲ್ಲಿ ಲಿಂಗಾಯತ ಸೇರಿದಂತೆ ಮುಂದುವರೆದ ಸಮುದಾಯಗಳ ಮತದಾರರು ಹೆಚ್ಚಿದ್ದಾರೆ. ಹೀಗಾಗಿ ಅಹಿಂದ ಸಂಘಟನೆ ಹಾಗೂ ಸಮಾವೇಶಗಳನ್ನು ಮಾಡುವುದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಹಿಂದ ಸಮಾವೇಶ ಮಾಡಲು ಅವಕಾಶ ಕೊಡಬಾರದು ಎಂದು ಹೈಕಮಾಂಡ್‌ಗೆ ರಾಜ್ಯ ಕಾಂಗ್ರೆಸ್‌ನ ಹಲವು ನಾಯಕರು ಆಗ್ರಹಿಸಿದ್ದರು. ಆದ್ದರಿಂದ ಸಮಾವೇಶ ನಡೆಸಲು ಹೈಕಮಾಂಡ್ ಮೊದಲು ಒಪ್ಪಿಗೆ ಕೊಟ್ಟಿರಲಿಲ್ಲ.

ಹೈಕಮಾಂಡ್‌ಗೆ ಮನವರಿಕೆ

ಹೀಗಾಗಿ ನೇರವಾಗಿ ಹೈಕಮಾಂಡ್ ಭೇಟಿ ಮಾಡಿದ ಸಿದ್ದರಾಮಯ್ಯ ಅವರು ಅಹಿಂದ ಸಂಘಟನೆಯ ಅಗತ್ಯತೆಯನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕ ಸಮಾವೇಶ ನಡೆಸಲು ಹೈಕಮಾಂಡ್ ಒಪ್ಪಿಗೆ ಕೊಟ್ಟಿದೆ. ಸದ್ಯ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷದ ಕೈಹಿಡಿದಿಲ್ಲ. ಈ ಸಂದರ್ಭದಲ್ಲಿ ಉಳಿದ ಮತಗಳನ್ನು ಕೂಡ ನಾವು ಬಿಟ್ಟು ಕೊಡಲಬಾರದು. ನಮಗೆ ಉಳಿದಿರುವ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಮತಗಳನ್ನು ಕ್ರೂಢೀರಣ ಮಾಡುವುದು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಅವರು ಅಂಕಿ-ಅಂಶಗಳ ಸಮೇತ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಮಾತಿಗೆ ಹೈಕಮಾಂಡ್ ಒಪ್ಪಿದೆ.

ಹಿಂದುಳಿದ ನಾಯಕ ಸಿದ್ದರಾಮಯ್ಯ

ಕುರುಬ ಎಸ್‌ಟಿ ಹೋರಾಟದಲ್ಲಿ ಭಾಗವಹಿಸದೇ ಸಿದ್ದರಾಮಯ್ಯ ಅವರು ಕುತೂಹಲ ಮೂಡಿಸಿದ್ದರು. ಜೊತೆಗೆ ಕುರುಬ ಎಸ್‌ಟಿ ಹೋರಾಟ ಸಂಘ ಪರಿವಾರದ ಕುಮ್ಮಕ್ಕಿನಿಂದ ಬಿಜೆಪಿ ಮಾಡುತ್ತಿರುವ ಹೋರಾಟ. ಬಿಜೆಪಿ ಸರ್ಕಾರವಿದ್ದಾಗ ಸಚಿವ ಈಶ್ವರಪ್ಪ ಅವರು ಹೋರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದರು. ಆ ಮೂಲಕ ಕುರುಬ ಎಸ್‌ಟಿ ಹೋರಾಟ ಕೇವಲ ರಾಜಕೀಯಕ್ಕಾಗಿ ಮಾಡುತ್ತಿರುವ ಹೋರಾಟ ಎಂದು ಸುದ್ದರಾಮಯ್ಯ ಅವರು ಪ್ರಚುರಪಡಿಸಿದ್ದರು.

ಇದೀಗ ಮತ್ತೆ ಅಹಿಂದ ಅಸ್ತ್ರದ ಮೂಲಕ ಅಧಿಕಾರಕ್ಕೇರಲು ಸಿದ್ದರಾಮಯ್ಯ ಅವರು ಪ್ರಯತ್ನ ನಡೆಸಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿನ ತಮ್ಮ ವಿರೋಧಿಗಳನ್ನು ಕೂಡ ಅಹಿಂದ ಅಸ್ತ್ರದ ಮೂಲಕ ಕಟ್ಟಿಹಾಕಿದ್ದಾರೆ. ಆದರೆ ಈ ಹಿಂದಿನಂತೆ ಅಹಿಂದ ಅಸ್ತ್ರ ಸಕ್ಸಸ್ ಆಗುತ್ತದೆಯಾ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

- Advertisement -


LEAVE A REPLY

Please enter your comment!
Please enter your name here

Most Popular

Recent Comments