ಬೆಂಗಳೂರು,ಫೆ.6- ವಿಧಾನಪರಿಷತ್ನ ಸಭಾಪತಿ ಸ್ಥಾನದ ಬಗ್ಗೆ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಮಂಗಳವಾರ ನಡೆಯವ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.
ಪ್ರತಾಪ್ಚಂದ್ರಶೆಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಸೋಮವಾರದಿಂದ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಸೋಮವಾರ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕು, ಮಂಗಳವಾರ ನೂತನ ಸಭಾಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ.
ಬಹುತೇಕ ಸಂದರ್ಭಗಳಲ್ಲಿ ಸಭಾಪತಿಯವರನ್ನು ಅವಿರೋಧ ಆಯ್ಕೆ ಮಾಡುವ ಸಂಪ್ರದಾಯವಿತ್ತು. ಈ ಮೊದಲು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪ್ರತಾಪ್ಚಂದ್ರಶೆಟ್ಟಿ ಅವರನ್ನು ಸಭಾಪತಿಯನ್ನಾಗಿ ಆಯ್ಕೆ ಮಾಡಿಕೊಂಡರೆ, ಜೆಡಿಎಸ್ನ ಎಸ್.ಎಲ್.ಧರ್ಮೇಗೌಡ ಅವರನ್ನು ಉಪಸಭಾಪತಿಯನ್ನಾಗಿ ಆಯ್ಕೆ ಮಾಡಿತ್ತು.
ವಿವಿಧ ರಾಜಕೀಯ ಬೆಳವಣಿಗೆಗಳ ನಂತರ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ನ ಸಂಖ್ಯಾಬಲ ಕುಗ್ಗಿದೆ. ಈ ನಡುವೆ ಜೆಡಿಎಸ್ ಕಾಂಗ್ರೆಸ್ನ ಸಂಬಂಧ ಹಳಸಿಕೊಂಡಿದೆ. ಜೆಡಿಎಸ್ ವಿಧಾನಪರಿಷತ್ನಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದೆ.
ಕಳೆದ ಸೆಪ್ಟೆಂಬರ್ನಲ್ಲಿ ನಡೆದ ವಿಧಾನಮಂಡಲ ಕಲಾಪದಲ್ಲಿ ಎಪಿಎಂಸಿ, ಭೂ ಸುಧಾರಣೆ ಮತ್ತು ಕಾರ್ಮಿಕ ಕಾಯ್ದೆಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದವು. ವಿಧಾನಪರಿಷತ್ನಲ್ಲಿ ತಡರಾತ್ರಿವರೆಗೂ ಕಲಾಪ ನಡೆದರೂ ಮಸೂದೆಗಳು ಅಂಗೀಕಾರಗೊಳ್ಳದೆ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು.
ಅನಂತರ ಅಸಮಾಧಾನಗೊಂಡ ಬಿಜೆಪಿ ಸಭಾಪತಿ ಪ್ರತಾಪ್ಚಂದ್ರಶೆಟ್ಟಿ ಅವರನ್ನು ಪದಚ್ಯುತಗೊಳಿಸಲು ಪ್ರಯತ್ನ ನಡೆಸಿತ್ತು. ಒಮ್ಮೆ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಚರ್ಚೆಗೆ ಬರಲಿಲ್ಲ. ಹಠಕ್ಕೆ ಬಿದ್ದ ಬಿಜೆಪಿ ಎರಡನೇ ಬಾರಿಗೂ ಅವಿಶ್ವಾಸನಿರ್ಣಯದ ನೋಟಿಸ್ ನೀಡಿತ್ತು.
ಈ ನಡುವೆ ಎಸ್.ಎಲ್.ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ತೆರವಾದ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಬಿಜೆಪಿಯ ಎಂ.ಕೆ.ಪ್ರಾಣೇಶ್ ಹೆಚ್ಚು ಮತ ಪಡೆದು ಆಯ್ಕೆಯಾದರು.
ವಿಧಾನಪರಿಷತ್ನಲ್ಲಿ ಬಿಜೆಪಿ 31, ಜೆಡಿಎಸ್ 13 ಸೇರಿ 44 ಸದಸ್ಯರ ಸಂಖ್ಯಾಬಲ ಹೊಂದಿದೆ. ಕಾಂಗ್ರೆಸ್ 29 ಸದಸ್ಯರನ್ನು ಹೊಂದಿದೆ. ಒಬ್ಬ ಪಕ್ಷೇತರರಿದ್ದು, ಮತ್ತೊಂದು ಸ್ಥಾನ ಖಾಲಿ ಇದೆ. ಸಂಖ್ಯಾಬಲವನ್ನು ನೋಡಿದರೆ ಕಾಂಗ್ರೆಸ್ ವಿಧಾನಪರಿಷತ್ನಲ್ಲಿ ದುರ್ಬಲವಾಗಿದೆ.
ಸಭಾಪತಿ-ಉಪಸಭಾಪತಿ ಸೇರಿದಂತೆ ಯಾವುದೇ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುವಷ್ಟು ಸಂಖ್ಯಾಸಾಮಥ್ರ್ಯವನ್ನು ಹೊಂದಿಲ್ಲ. ಆದರೂ ಕೂಡ ಜೆಡಿಎಸ್ನ ಜಾತ್ಯತೀತತೆಯನ್ನು ಬಯಲು ಮಾಡಬೇಕು ಎಂಬ ಹಠಕ್ಕೆ ಬಿದ್ದು ವಿಧಾನಪರಿಷತ್ ಸಭಾಪತಿ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಒತ್ತಾಸೆಯಂತೆ ಕಾಂಗ್ರೆಸ್ನ ಸದಸ್ಯರಾದ ನಸೀರ್ ಅಹಮ್ಮದ್ ಅವರನ್ನು ಸಭಾಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಗಳಿವೆ. ನಿರೀಕ್ಷಿತ ಸಂಖ್ಯಾಬಲ ಇಲ್ಲದೇ ಇದ್ದರೂ ಕೂಡ ಸಾಂಕೇತಿಕ ಸ್ಪರ್ಧೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಈ ಮೂಲಕ ಸಭಾಪತಿ ಆಯ್ಕೆಗೂ ಚುನಾವಣೆ ನಡೆಯಬೇಕು, ಜೆಡಿಎಸ್-ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಿದೆಯೇ, ಇಲ್ಲವೇ ಎಂಬುದು ಸ್ಪಷ್ಟವಾಗಬೇಕು. ಇದೆಲ್ಲ ವಿಧಾನಪರಿಷತ್ನ ಸಭಾನಡವಳಿಕೆಗಳಲ್ಲಿ ದಾಖಲಾಗಬೇಕು ಎಂಬುದು ಕಾಂಗ್ರೆಸ್ನದ್ದಾಗಿದೆ. ಹೀಗಾಗಿ ಅವಿರೋಧ ಆಯ್ಕೆಗೆ ಅಡ್ಡಿಪಡಿಸಲು ನಿರ್ಧರಿಸಲಾಗಿದೆ.