ಮಂಗಳೂರು: ತ್ರಿಸ್ತರದ ಪಂಚಾಯತ್ ರಾಜ್ ವ್ಯವಸ್ಥೆಯು ಕರಾವಳಿಯ ಎರಡು ಜಿಲ್ಲೆಗಳ ಸಹಿತ ರಾಜ್ಯಾದ್ಯಂತ ಸದ್ಯವೇ ಸಂಪೂರ್ಣವಾಗಿ ಸೌರ ವಿದ್ಯುತ್ ಅಳವಡಿಕೆ ಮಾಡಿಕೊಳ್ಳಲಿದೆ. ಈ ಮೂಲಕ ವಿದ್ಯುತ್ ಅವಲಂಬನೆ ತಪ್ಪಿ ಅಧಿಕಾರ ವಿಕೇಂದ್ರೀಕರಣದ ಆಶಯ ಹೊಸ ಆಯಾಮ ಪಡೆಯಲಿದೆ.
ಎಲ್ಲ ಜಿ. ಪಂ., ತಾ.ಪಂ. ಮತ್ತು ಗ್ರಾ.ಪಂ. ಕಚೇರಿಗಳಲ್ಲಿ ತಿಂಗಳೊಳಗೆ “ಸೋಲಾರ್ ರೂಫ್ ಟಾಪ್ ಪವರ್’ ವ್ಯವಸ್ಥೆ ಅಳವಡಿಸಲು ರಾಜ್ಯ ಸರಕಾರ ಮುಂದಾಗಿದೆ.
ವಿದ್ಯುತ್ಛಕ್ತಿ ಕೊರತೆ ಹೋಗಲಾಡಿಸುವುದು, ಬಿಲ್ ಹೊರೆ ತಗ್ಗಿಸುವುದು, ಸಾರ್ವಜನಿಕ ಉದ್ದೇಶಕ್ಕೆ ಸೌರ ಮೂಲದ ವಿದ್ಯುತ್ಛಕ್ತಿ ಬಳಕೆಯನ್ನು ಪ್ರೋತ್ಸಾಹಿಸುವುದು ಈ ಕ್ರಮದ ಉದ್ದೇಶಗಳು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಎರಡು ಪ್ರತ್ಯೇಕ ಗುತ್ತಿಗೆದಾರ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.
ಈ ಗುತ್ತಿಗೆದಾರರು ಜಿ.ಪಂ.ನಿಂದ ಕಾರ್ಯಾದೇಶ ಪಡೆದ ದಿನಾಂಕದಿಂದ ಕನಿಷ್ಠ ಒಂದು ತಿಂಗಳು ಮತ್ತು ಗರಿಷ್ಠ 6 ತಿಂಗಳೊಳಗೆ ಸೋಲಾರ್ ವಿದ್ಯುತ್ ಸ್ಥಾವರ ಅಳವಡಿಸಿ ಮೆಸ್ಕಾಂ ಗ್ರಿಡ್ ನೊಂದಿಗೆ ಸಿಂಕ್ರೋನೈಸ್ ಮಾಡಿಸಬೇಕಿದೆ. 5 ವರ್ಷಗಳ ವರೆಗೆ ಇದರನಿರ್ವಹಣೆಯ ಹೊಣೆ ಗುತ್ತಿಗೆದಾರರದು. ಮಂಗಳೂರಿನ ಜಿ.ಪಂ. ಕಟ್ಟಡಕ್ಕೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಸೌರ ಶಕ್ತಿ ಅಳವಡಿಕೆ ಕಾರ್ಯ ನಡೆಯಲಿದೆ.
ಅನುದಾನ ಬಳಕೆ ಹೇಗೆ?
15ನೇ ಹಣಕಾಸು ಆಯೋಗದ ಮೂಲ ಅನುದಾನದಡಿ ಅಗತ್ಯದ ಆಧಾರದ ಮೇಲೆ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಸಲು ಅವಕಾಶವಿದೆ. ಜತೆಗೆ ಜಿ.ಪಂ-ತಾ.ಪಂ.ಗಳ ಅಭಿವೃದ್ಧಿ ಅನುದಾನ ಸೇರಿ ಶೇ. 20ರಷ್ಟು ಅನುದಾನ ವಿನಿಯೋಗಿಸಬಹುದು. ಗ್ರಾ.ಪಂ.ಗಳಲ್ಲಿ 15ನೇ ಹಣಕಾಸು ಯೋಜನೆ, ಪಂಚಾಯತ್ ಆದಾಯ, ಅಭಿವೃದ್ಧಿ ಅನುದಾನ, ಜಿ.ಪಂ-ತಾ.ಪಂ ಅಧ್ಯಕ್ಷರ ಅನಿರ್ಬಂಧಿತ ಅನುದಾನ, ಅಧಿಬಾರ ಶಿಲ್ಕು, ಕರ ವಸೂಲಿ, ರಾಜಸ್ವ ಮೂಲದ ಅನುದಾನ, ಶಾಸಕರು-ಸಂಸದರ ಅಭಿವೃದ್ಧಿ ಅನುದಾನ, ಸಿಎಸ್‌ಆರ್ ಮತ್ತಿತರ ವಿವಿಧ ಮೂಲಗಳಿಂದ ಸೋಲಾರ್ ವಿದ್ಯುಚ್ಚಕ್ತಿ ವ್ಯವಸ್ಥೆ ಮಾಡಬಹುದು. ಗ್ರಾ.ಪಂ.-ತಾ.ಪಂ.ನಲ್ಲಿ 2020- 21ನೇ ಸಾಲಿನ ಕಾಮಗಾರಿಗಳ ಕ್ರಿಯಾಯೋಜನೆಯಲ್ಲಿ ಸೋಲಾರ್ ಘಟಕ ಅಳವಡಿಕೆ ಸೇರಿಸಿ ಅನುಮೋದಿಸಲು ಸೂಚಿಸಲಾಗಿದೆ.
ಕೋಟಿ ರೂ. ವಿದ್ಯುತ್ ಬಿಲ್ ಬಾಕಿ!
ಕರಾವಳಿಯ ಒಂದೊಂದು ಗ್ರಾ.ಪಂ.ನಲ್ಲೂ ನೀರಿನ ಪಂಪ್ ಮತ್ತು ಬೀದಿ ದೀಪಗಳ ಬಳಕೆ ಸಹಿತ ಕನಿಷ್ಠ 25 ಸಾವಿರ ರೂ.ಗಳಿಂದ 1 ಲಕ್ಷ ರೂ.ಗೂ ಅಧಿಕ ವಿದ್ಯುತ್ ಬಿಲ್ ಬರುತ್ತಿದೆ. ಕೆಲವು ಗ್ರಾ.ಪಂ.ಗಳು ನಿಯಮಿತವಾಗಿ ವಿದ್ಯುತ್ ಬಿಲ್ ಪಾವತಿಸದೆ ಬಾಕಿ 1 ಕೋ.ರೂ. ಮೀರಿದ್ದೂ ಇದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸುವುದೂ ಸೋಲಾರ್ ವಿದ್ಯುತ್ ಅಳವಡಿಕೆಯ ಉದ್ದೇಶಗಳಲ್ಲಿ ಒಂದು.