ಹಾಸನ: ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಆಕೆಯ ಮನೆಯಲ್ಲೇ ಬಲವಂತವಾಗಿ ಮದುವೆಯಾಗಿ ಅಪಹರಿಸಿಕೊಂಡು ಹೋದ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದು, ಅಂದು ಹಾಗೂ ಆ ಬಳಿಕ ನಡೆದ ಬೆಳವಣಿಗೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾಳೆ.
ಜನವರಿ 25ರಂದು ದಕ್ಷಿಣಕನ್ನಡದ ಪುತ್ತೂರಿನ ಸುಜಿತ್ ಕೃಷ್ಣ ಎಂಬವರೊಂದಿಗೆ ಹಸೆಮಣೆ ಏರಬೇಕಾಗಿದ್ದ ಯುವತಿಯನ್ನು, ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾದ ಸತೀಶ್ ಎಂಬಾತ ಜ. 21ರಂದು ಆಕೆಯ ಮನೆಯಲ್ಲೇ ಬಲವಂತವಾಗಿ ತಾಳಿ ಕಟ್ಟಿದ್ದ. ನಂತರ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದ. ಈ ಬಗ್ಗೆ ಯುವತಿಯ ಮನೆಯವರು ಸಕಲೇಶಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನುಬಿದ್ದ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದರು. ಇದೀಗ ಯುವತಿಯಿಂದ ಪ್ರಕರಣದ ಕುರಿತು ಪೊಲೀಸರು ಹೇಳಿಕೆ ಪಡೆದಿದ್ದು, ಆ ಕುರಿತ ಮಾಹಿತಿ ಬಹಿರಂಗಗೊಂಡಿದೆ.
ನನ್ನ ಜತೆ ಮಾತನಾಡಲು ಮನೆಗೆ ಬಂದಿದ್ದ ಸತೀಶ್, ಕೊಲೆ ಬೆದರಿಕೆ ಒಡ್ಡಿದ. ಮಾತ್ರವಲ್ಲ ಬಲವಂತವಾಗಿ ತಾಳಿಯನ್ನೂ ಕಟ್ಟಿದ. ಎರಡು ಸಲ ತಾಳಿಯನ್ನು ಕಿತ್ತೆಸೆದರೂ ಬಿಡದೆ ನಂತರ ನನ್ನನ್ನು ಕೊಡಗಿನ ರೆಸಾರ್ಟ್ಗೆ ಕರೆದೊಯ್ದ. ಸತೀಶ್ ಹಾಗೂ ಆತನ ಅಣ್ಣ ಇಬ್ಬರೂ ಸೇರಿ ಥಳಿಸಿ, ಚಿತ್ರಹಿಂಸೆ ನೀಡಿದರು. ‘ನಾನೇ ಓಡಿ ಬಂದೆ, ನನಗೆ ಒಪ್ಪಿಗೆ ಇದೆ ಎಂದು ಹೇಳು, ಆಸ್ತಿ ಸೈಟು ಒಡವೆ ಕೊಡುತ್ತೇವೆ’ ಎಂದು ಸತೀಶ್ ಅಕ್ಕ ಆಮಿಷವೊಡ್ಡಿದರೂ ನಾನು ಯಾವುದಕ್ಕೂ ಒಪ್ಪಿರಲಿಲ್ಲ. ಬೇಸತ್ತು ಕೊಡಗಿನ ರೆಸಾರ್ಟ್ನಲ್ಲೇ 2 ಬಾಟಲಿ ಮಸ್ಕಿಟೋ ಲಿಕ್ವಿಡ್ ಕುಡಿದಿದ್ದೆ. ಆದರೆ ಅವರೆಲ್ಲ ಸೋಪ್ ನೀರು ಕುಡಿಸಿ ಬದುಕಿಸಿದ್ದರು ಎಂದು ನೋವು ತೋಡಿಕೊಂಡಿರುವ ಸಂತ್ರಸ್ತೆ, ನಾನು ಯಾವುದೇ ಕಾರಣಕ್ಕೂ ಸತೀಶ್ ಜತೆಗೆ ಹೋಗುವುದಿಲ್ಲ, ನನಗಾದ ಅನ್ಯಾಯ ಯಾರಿಗೂ ಆಗಬಾರದು, ಸತೀಶ್ ಹಾಗೂ ಆತನ ಸ್ನೇಹಿತರನ್ನೂ ಬಂಧಿಸಿ ಕ್ರಮಕೈಗೊಳ್ಳಿ ಎಂದು ಪೊಲೀಸರಲ್ಲಿ ವಿನಂತಿ ಮಾಡಿಕೊಂಡಿದ್ದಾಳೆ.