ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಪೊಲೀಸ್ ಭದ್ರತೆಯನ್ನು ಮುರಿದು ಮುನ್ನುಗ್ಗಿದ ರೈತರು ಕೆಂಪುಕೋಟೆಗೆ ನುಗ್ಗಿದ್ದಾರೆ.
ಕೆಂಪುಕೋಟೆಯ ಮುಂಭಾಗದ ಧ್ವಜ ಸ್ತಂಭ ಏರಿರುವ ಪ್ರತಿಭಟನಾಕಾರರು ತಮ್ಮ ಬಾವುಟಗಳನ್ನು ಹಾರಿಸಿದರು. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಪ್ರಧಾನ ಮಂತ್ರಿಯವರು ಧ್ವಜಾರೋಹಣ ಮಾಡುವ ಧ್ವಜಸ್ತಂಭದ ಮೇಲೆರಿದ ಪ್ರತಿಭಟನಾಕಾರರು ತಮ್ಮ ಸಂಘಟನೆಗಳ ಧ್ವಜವನ್ನು ಹಾರಿಸಿದರು.
ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಟ್ರ್ಯಾಕ್ಟರ್ ರಾಲಿ ಹಿಂಸಾತ್ಮಕ ರೂಪ ಪಡೆದಿದೆ. ರೈತರ ಟ್ರ್ಯಾಕ್ಟರ್ ರಾಲಿಗೆ ಅಡ್ಡಲಾಗಿ ನಿಲ್ಲಿಸಿದ್ದ ಬಸ್ ಗಳ ಗಾಜನ್ನು ಪುಡಿಗೈಯಲಾಗಿದೆ. ಬಸ್ ಗೆ ಟ್ರ್ಯಾಕ್ಟರ್ ಗಳಿಂದ ಗುದ್ದಿ ಹಾನಿ ಮಾಡಲಾಗಿದೆ. ಮತ್ತೊಂದೆಡೆ ಮುಂಜಾಗ್ರತಾ ಕ್ರಮವಾಗಿ ದೆಹಲಿ ಮೆಟ್ರೋ ಸಂಚಾರ ಬಂದ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದಲ್ಲದೆ ದೆಹಲಿ ಪೊಲೀಸರ ಗುಂಡಿಗೆ ಓರ್ವ ರೈತ ಮೃತಟ್ಟಿರುವುದಾಗಿ ಇದೀಗ ವರದಿಯಾಗಿದೆ. ರೈತ ಸಂಘಟನೆಗಳ ಮುಖಂಡರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.