ಮಂಗಳೂರು: ಮಹಿಳಾ ಉದ್ಯಮಿಗಳು ಛಲ, ಶ್ರದ್ಧೆಯಿಂದ ತೊಡಗಿಸಿಕೊಳ್ಳುವುದರಿಂದ ಪುರುಷರಿಗಿಂತ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಿದ್ದಾರೆ. ಮಹಿಳಾ ಉದ್ಯಮಿಗಳು ತಮ್ಮ ಉದ್ಯಮದ ಬಗ್ಗೆ ನಿಖರ ವಿಶ್ವಾಸ ಮತ್ತು ರೂಪುರೇಶೆ ಸಿದ್ಧಪಡಿಸಿ ಸರಕಾರದಿಂದ ಯೋಗ್ಯ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಜ್ಯೋತಿ ಲ್ಯಾಬ್ಸ್ ಇದರ ಜಂಟಿ ಎಂಡಿ ಉಲ್ಲಾಸ್ ಕಾಮತ್ ಹೇಳಿದ್ದಾರೆ. ಅವರು ಫುಜ್ಲಾನ್ ಜಿಪಿಎಲ್ ಉತ್ಸವ 2021 ಇದರ ಎರಡನೇ ದಿನ ಉದ್ಯಮಿಗಳ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಸಭೆಯಲ್ಲಿ ಸಂಸದರೂ, ಭಾಜಪಾ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಹ್ಯಾಂಗ್ಯೋ ಐಸ್ ಕ್ರೀಂ ಎಂಡಿ ಪ್ರದೀಪ್ ಪೈ, ಪೈ ಸೇಲ್ಸ್ ನ ಗಣಪತಿ ಪೈ, ದುರ್ಗಾ ಲ್ಯಾಬೋರೇಟರಿಸ್ ನ ರಾಜೇಶ್ ಕಿಣಿ, ಮಹೇಶ್ ಕಿಣಿ ಹಾಗೂ ಅನೇಕ ಗಣ್ಯರು ಭಾಗವಹಿಸಿದರು.
ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ವರ್ಣರಂಜಿತ ಐದನೇ ವರ್ಷದ ಫುಜ್ಲಾನಾ ಜಿಪಿಎಲ್ ಉತ್ಸವ-2021 ಇದರ ಎರಡನೇ ದಿನ ಭರಪೂರ ಮನೋರಂಜನೆ ಮತ್ತು ಸಾಂಸ್ಕೃತಿಕ ರಸದೌತಣ ಆಗಮಿಸಿದ ಜನರಿಗೆ ಉದರಕ್ಕೆ ಮತ್ತು ಮನಸ್ಸಿಗೆ ಭರಪೂರ ಸಂತೋಷವನ್ನು ನೀಡಿತು. ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ಹಚ್ಚಹಸುರಿನ ಕ್ರೀಡಾಂಗಣದಲ್ಲಿ ರಾಜ್ಯ, ರಾಷ್ಟ್ರದ ಒಟ್ಟು 12 ತಂಡಗಳು ಪ್ರತಿಷ್ಟಿತ ಫುಜ್ಲಾನಾ ಟ್ರೋಫಿಗಾಗಿ ಸೆಣಸಾಟ ನಡೆಸುತ್ತಿವೆ. ವಿಶಾಲ ಕ್ಯಾಂಪಸ್ಸಿನ ಇನ್ನೊಂದು ಅಂಗಣದಲ್ಲಿ ಅರುಣಾ ಮಸಾಲ ಫುಡ್ ಕೋರ್ಟ್ ನಲ್ಲಿ ಆಟಗಾರರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕವಾಗಿ ಕುಳಿತು ವೈವಿಧ್ಯಮಯ ಅಹಾರವನ್ನು ಉಣಬಡಿಸುವ ವ್ಯವಸ್ಥೆ ಮಾಡಲಾಗಿದ್ದು, ಅದೇ ಫುಡ್ ಕೋರ್ಟ್ ನ ಮತ್ತೊಂದು ಭಾಗದಲ್ಲಿ ಆಗಮಿಸುವ ಕ್ರಿಕೆಟ್ ಪ್ರೇಮಿಗಳಿಗೆ, ಅತಿಥಿಗಳಿಗೆ ಹತ್ತು ಹಲವು ಬಗೆಯ ತಿಂಡಿ, ತಿನಿಸು ಸಹಿತ ವಿಭಿನ್ನ ಆರೋಗ್ಯದಾಯಕ ಪಾನೀಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಫುಡ್ ಕೋರ್ಟ್ ನಲ್ಲಿ ಆಹಾರ ಸೇವಿಸುತ್ತಾ ಇನ್ನೊಂದೆಡೆ ವಿಶೇಷವಾಗಿ ತಯಾರು ಮಾಡಿರುವ ವೇದಿಕೆಯಲ್ಲಿ ವಿಭಿನ್ನ ವಯೋಮಾನದ ಅಸಂಖ್ಯಾತ ಸಮಾಜ ಭಾಂದವರು ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ವೀಕ್ಷಿಸಬಹುದಾಗಿದೆ. ಕ್ರಿಕೆಟ್ ಮೈದಾನಕ್ಕೆ ತಾಗಿಕೊಂಡಿರುವ ನದಿಯಲ್ಲಿ ಬೋಟಿಂಗ್ ಕೂಡ ಮಾಡಬಹುದಾಗಿದ್ದು, ಮಕ್ಕಳಿಗಾಗಿ ಕಿಡ್ಸ್ ಝೋನ್, ಬಂಗಿ ಜಂಪಿಂಗ್, ಜಯಂಟ್ ವೀಲ್ ಕೂಡ ಆಯೋಜಿಸಲಾಗಿದೆ. ಸಾವಿರಾರು ಜನರು ಭಾಗವಹಿಸುತ್ತಿರುವ ಈ ಉತ್ಸವದ ಎರಡನೇ ದಿನ ವಿಶೇಷ ಆಕರ್ಷಣೆಯಾಗಿ ಗರ್ಭ ನೃತ್ಯವನ್ನು ಪರಿಣಿತರ ಮಾರ್ಗದರ್ಶನದಲ್ಲಿ ಜನರು ಕುಣಿದು ಕುಪ್ಪಳಿಸಿ ಸಂತೋಷ ಅನುಭವಿಸಿದರು..