ಬೆಳಗಾವಿ, ಜನವರಿ 31; “ಅರವಿಂದ ಪಾಟೀಲ್ ಮುಂದಿನ ಬಿಜೆಪಿ ಅಭ್ಯರ್ಥಿ” ಎಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷರಿಗೆ ಈ ಕುರಿತು ಪತ್ರವನ್ನು ಬರೆಯಲು ಖಾನಾಪುರದ ಬಿಜೆಪಿ ಕಾರ್ಯಕರ್ತರು ತೀರ್ಮಾನಿಸಿದ್ದಾರೆ.
ಲಕ್ಷ್ಮಣ್ ಸವದಿ ವಿರುದ್ಧ ಖಾನಾಪುರದ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಬಿಜೆಪಿ ನಾಯಕರು ಸಭೆ ಸಭೆ ಸೇರಿ ಉಪಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅರವಿಂದ ಪಾಟೀಲ್ ಖಾನಾಪುರ ಕ್ಷೇತ್ರದ ಎಂಇಎಸ್ ಮಾಜಿ ಶಾಸಕ.
ಅರವಿಂದ ಪಾಟೀಲ್ ಮುಂದಿನ ಚುನಾವಣೆ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂದು ಲಕ್ಷ್ಮಣ ಸವದಿ ಹೇಳಿರುವುದು ಅಕ್ರೋಶಕ್ಕೆ ಕಾರಣವಾಗಿದೆ.
“ನಾವೇನು ಕೈಯಲ್ಲಿ ಬಳೆ ಹಾಕಿಕೊಂಡು ಕುಳಿತಿದ್ದೇವಾ?. ರಾಜೀನಾಮೆ ಪತ್ರ ರೆಡಿ ಮಾಡಿಕೊಂಡು ರಾಜ್ಯಾಧ್ಯಕ್ಷರಿಗೆ, ಸಂಘಟನಾ ಕಾರ್ಯದರ್ಶಿಗೆ ನೀಡೋಣ. ನಮ್ಮ ಕ್ಷೇತ್ರದಲ್ಲಿ ನಾವೇ ರಾಜರು ಇದ್ದ ಹಾಗೇ” ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
“ಅರವಿಂದ ಪಾಟೀಲ್ ಸವದಿ ಮನೆಯಲ್ಲಿ ಪಾತ್ರೆ ತೊಳೀತಾನೆ, ಅರಿವೆ ಒಗೀತಾನೆ. ಸವದಿ ತನ್ನ ವೈಯಕ್ತಿಕ ಲಾಭಕ್ಕಾಗಿ ಅರವಿಂದ ಪಾಟೀಲ್ ಹೆಸರು ಹೇಳುತ್ತಿದ್ದಾರೆ. ನಾಟಕೀಯ ಹಾಗೂ ಢೋಂಗಿ ರಾಜಕಾರಣ ಮಾಡುತ್ತಿದ್ದಾರೆ” ಎಂದು ಖಾನಾಪುರದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸ್ವಾರ್ಥ ರಾಜಕಾರಣ ಮಾಡುತ್ತಿರುವ ಲಕ್ಷ್ಮಣ ಸವದಿ ವಿರುದ್ಧ ರಾಜ್ಯಾಧ್ಯಕ್ಷರಿಗೆ ಎಲ್ಲಾ ಕಾರ್ಯಕರ್ತರು ಸೇರಿ ಪತ್ರ ಬರೆಯೋಣ. ಲಕ್ಷ್ಮಣ್ ಸವದಿಗೆ ನಮ್ಮ ತಾಲೂಕು ರಾಜಕಾರಣದಲ್ಲಿ ಪ್ರವೇಶಿಸುವ ಹಕ್ಕಿಲ್ಲ” ಎಂದು ಖಾನಾಪುರ ಬಿಜೆಪಿ ಮುಖಂಡ ಪ್ರಮೋದ್ ಕೋಚರಿ ಹೇಳಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಪುಸ್ತಕ ಬಿಡುಗಡೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಅರವಿಂದ ಪಾಟೀಲ್ ಭಾಗಿಯಾಗಿದ್ದರು. ನಾಡದ್ರೋಹಿ ಘೋಷಣೆ ಕೂಗಿದ್ದ ಅರವಿಂದ ಪಾಟೀಲ್ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಡಿಸಿಎಂ ಹೇಳಿಕೆ ಕೊಟ್ಟಿದ್ದರು.
“ಎಂಇಎಸ್ ಮುಗಿಸೋದು ನಮ್ಮ ಕರ್ತವ್ಯ ಎಂಇಎಸ್‌ನವರು ಯಾರು ಯಾರು ಪಕ್ಷಕ್ಕೆ ಬರುತ್ತಾರೋ ಅವರನ್ನು ಕರೆತಂದು ಎಂಇಎಸ್ ಚಾಪ್ಟರ್ ಕ್ಲೋಸ್ ಮಾಡ್ತೀವಿ” ಎಂದು ಸಹ ಲಕ್ಷ್ಮಣ ಸವದಿ ಹೇಳಿದ್ದರು.