ಮಂಗಳೂರು:ಕಾರವಾರ, ಅಥಣಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಖಂಡನೀಯ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಹೇಳಿದರು.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇಂತಹ ಉದ್ಧಟತನದ ಹೇಳಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿದ್ದಾರೆ ಎಂದರು.
ಕಾರವಾರ, ಅಥಣಿ, ಬೆಳಗಾವಿ ಭಾಗದಲ್ಲಿ ಮರಾಠಿಗರು ಹೆಚ್ಚಾಗಿದ್ದಾರೆ ಎಂಬ ಮಾತ್ರಕ್ಕೆ ಮಹಾರಾಷ್ಟ್ರಕ್ಕೆ ಸೇರಿಸಲು ಆಗುವುದಿಲ್ಲ. ಮುಂಬೈಯಲ್ಲಿ ಕೂಡ ಹೆಚ್ಚು ಕನ್ನಡಿಗರಿದ್ದಾರೆ, ಅದನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಿ ಎಂದು ಒತ್ತಾಯಿಸುತೇನೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಮಾತೇ ಇಲ್ಲ. ಅವರು ಇಂತಹ ಹೇಳಿಕೆ ಕೊಡುವ ಮೊದಲು ಸರಿಯಾಗಿ ಯೋಚನೆ ಮಾಡಬೇಕು ಎಂದು ಡಿಸಿಎಂ ಸವದಿ ಹೇಳಿದರು.