ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದೆ. ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಕೊಲೆ ಆರೋಪಿ ಕಾಲಿಗೆ ಹೆಣ್ಣೂರು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಕೊಲೆಗೆ ಬಳಸಿದ ಮಾರಾಕಾಸ್ತ್ರ ಜಪ್ತಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಆರೋಪಿ ರಘು, ಪಿಎಸ್‌ಐ ಲಿಂಗರಾಜ್ ಅವರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.
ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ವಸಂತ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಸಹ ಆರೋಪಿ ಮತ್ತೆ ಹಲ್ಲೆ ಮಾಡಲು ಮುಂದಾಗಿದ್ದು, ಆಗ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ರಾಮಮೂರ್ತಿನಗರದ ಹೆಣ್ಣೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ರಘುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ 14ರಂದು ಗಾರ್ಮೆಂಟ್ಸ್ ಉದ್ಯಮಿ ಶ್ರೀಧರ್ ಎಂಬುವವರನ್ನು ನಾಗವಾರ ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ರಘು ಗ್ಯಾಂಗ್ ಕೊಲೆ ಮಾಡಿತ್ತು. ಶ್ರೀಧರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹೇಶ್, ಹರೀಶ್, ಸುಜಿತ್ ನಾಯರ್, ಪ್ರಭು, ನೆಲ್ಸನ್, ರಘು ಸೇರಿ 6 ಮಂದಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಹಳೇ ಹಾಗೂ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.