ಹುಬ್ಬಳ್ಳಿ: ಜನರಿಗಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧ ಸರಿಯಲ್ಲ. ಈ ನಿಟ್ಟಿನಲ್ಲಿ ವಿಧಾನಪರಿಷತ್ತಿಗೆ ಮಾಧ್ಯಮದವರಿಗೆ ಪ್ರವೇಶ ನೀಡುವಂತೆ ತಿಳಿಸಿದ್ದೇನೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಸೂಚಿಸುತ್ತೇನೆ. ಸರಕಾರ ನಿರ್ಧರಿಸಿರುವ ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಲು ಸೂಚಿಸುವುದಾಗಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಸಭಾಪತಿಯಾದ ನಂತರ ಮೊದಲ ಬಾರಿಗೆ ಆಗಮಿಸಿದ ಬಸವರಾಜ ಹೊರಟ್ಟಿ ಅವರನ್ನು ನಗರದ ಹೊರ ವಲಯ ಗಬ್ಬೂರು ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಲವತ್ತು ವರ್ಷಗಳ ಹಿಂದಿನ ಮಾದರಿಯಲ್ಲಿ ವಿಧಾನಪರಿಷತ್ತು ಕಲಾಪ ನಡೆಸುತ್ತೇನೆ. ಹಿಂದೆ ಹೊರಟ್ಟಿ ಅಂತ ಒಬ್ಬರು ಸಭಾಪತಿಗಳಿದ್ದರು ಎಂದು ಮುಂದಿನ ಜನಾಂಗ ನೆನಪಿಟ್ಟುಕೊಳ್ಳುವ ಹಾಗೆ ಮಾದರಿಯಾಗಿ ಕೆಲಸ ನಿರ್ವಹಿಸುವೆ ಎಂದು ತಿಳಿಸಿದರು.