ಯಾದಗಿರಿ/ಸುರಪುರ: ಸಂಚಾರಿ ನಿಯಮ ಹಾಗೂ ಕಾನೂನು ಅರಿವು ಕುರಿತು ಜಾಗೃತಿ ಜಾಥಾ ನಡೆಸಿದ್ದಾಯಿತು.. ಇದೀಗ ಸುರಪುರ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಅವರು ವಿನೂತನ ಪ್ರಯತ್ನ ಮಾಡಿ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಪೊಲೀಸರಿಗೆ ಕೂಡ ಲಿಖಿತ ರಸ ಪ್ರಶ್ನೆ ಪರೀಕ್ಷೆ ನಡೆಸಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಸುರಪುರ ಉಪವಿಭಾಗದ ವ್ಯಾಪ್ತಿಯ ಸುರಪುರ,ಶಹಾಪುರ ಹಾಗೂ ಹುಣಸಗಿಯ ತಾಲೂಕಿನ 15 ಕಾಲೇಜ್ ಗಳಲ್ಲಿ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಸುರಪುರ ಉಪವಿಭಾಗದ 8 ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಕೂಡ ಲಿಖಿತ ಪರೀಕ್ಷೆ ಬರೆದರು.
ಒಂದು ಸಾವಿರ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಉತ್ಸಾಹದಿಂದ ಪರೀಕ್ಷೆ ಬರೆದರು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಕೂಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.