ದೆಹಲಿ: ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ಬಿಸಿ ಇನ್ನೂ ಆರಿಲ್ಲ. ಪೊಲೀಸರು ತನಿಖೆ ಶುರು ಮಾಡಿದ್ದಾರೆ. ರೈತರು ಪ್ರತಿಭಟನೆ ನಡೆಸುತ್ತಿರುವ ಗಡಿ ಭಾಗಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅದರಲ್ಲೂ ಘಾಜಿಯಾಪುರ ಗಡಿ ಪ್ರದೇಶದಲ್ಲಿ ನಿನ್ನೆ ರಾತ್ರಿ ಅಧಿಕಾರಿಗಳು ಬೀದಿ ದೀಪ ಬೇಕಂತಲೇ ಆರಿಸಿದ್ದಾರೆಂದು ರೈತರು ಆರೋಪ ಮಾಡಿದ್ದಾರೆ.
ಇನ್ನು ಜನವರಿ 26 ರಂದು ರೈತರ ಹೆಸರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟ ವಿಡಿಯೋವೊಂದನ್ನು ದೆಹಲಿ ಪೊಲೀಸರು ಇಂದು ಬಿಡುಗಡೆ ಮಾಡಿದ್ದು, ಕೆಂಪುಕೋಟೆ ಸಂಕೀರ್ಣದ ಒಳಗೆ ಬಸ್ವೊಂದನ್ನು ಧ್ವಂಸ ಮಾಡಿದ್ದನ್ನು ಇದರಲ್ಲಿ ನೋಡಬಹುದು. ಹಾಗೇ, ನಿನ್ನೆ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಪರಿಶೀಲನಾ ಸಭೆಯಲ್ಲಿ ನಿರ್ಣಯವಾದಂತೆ, ಎಫ್ಐಆರ್ನಲ್ಲಿ ಹೆಸರು ದಾಖಲಾದ ಸುಮಾರು 25 ರೈತ ಮುಖಂಡರಿಗೆ ಲುಕ್ಔಟ್ ನೋಟಿಸ್ ನೀಡಲು ದೆಹಲಿ ಪೊಲೀಸರು ಸಜ್ಜಾಗಿದ್ದಾರೆ.
ಅದಾದ ಬಳಿಕ ಅವರೆಲ್ಲ ತಮ್ಮ ಪಾಸ್ಪೋರ್ಟ್ನ್ನು ಪೊಲೀಸರ ಎದುರು ಒಪ್ಪಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆಗಳಿಗೆ ಭೇಟಿ ನೀಡಲಿರುವ ಅಮಿತ್ ಷಾ
ಜನವರಿ 26ರಂದು ನಡೆದ ಗಲಭೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪೊಲೀಸ್ ಸಿಬ್ಬಂದಿಯನ್ನು ಇಂದು ಗೃಹ ಸಚಿವ ಅಮಿತ್ ಷಾ ಭೇಟಿ ಮಾಡಲಿದ್ದಾರೆ. ಹಿಂಸಾಚಾರ ಸಂದರ್ಭದಲ್ಲಿ ಒಟ್ಟು 394 ಪೊಲೀಸರು ಗಾಯಗೊಂಡಿದ್ದರು. ಈ ನಿಟ್ಟಿನಲ್ಲಿ ಎರಡು ಆಸ್ಪತ್ರೆಗಳಿಗೆ ಅವರು ಭೇಟಿ ನೀಡಲಿದ್ದಾರೆ. ಅಲ್ಲಿಂದ ಕೆಂಪುಕೋಟೆಗೆ ತೆರಳಿ ಅಲ್ಲಿ ಉಂಟಾದ ಹಾನಿಯನ್ನು ಪರಿಶೀಲನೆ ಮಾಡಲಿದ್ದಾರೆ.