ನವದೆಹಲಿ, ಫೆಬ್ರವರಿ.04: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟದ ನಡುವೆ ದೆಹಲಿಯ ಕೆಂಪುಕೋಟೆಗೆ ನುಗ್ಗಿ “ನಿಶಾನ್ ಸಾಹೇಬ್” (ಸಿಖ್ ಧ್ವಜ) ಧ್ವಜವನ್ನು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ಬಂಧಿಸಿದ ಆರೋಪಿಯನ್ನು ಧರ್ಮೇಂದ್ರ ಸಿಂಗ್ ಹರ್ಮನ್ ಎಂದು ಗುರುತಿಸಲಾಗಿದೆ. ಭದ್ರತಾ ಸಿಬ್ಬಂದಿಯು ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಂತರದಲ್ಲಿ ಬುಧವಾರ 12 ಮಂದಿ ಶಂಕಿತ ಆರೋಪಿಗಳ ಭಾವಚಿತ್ರವನ್ನು ಬಿಡುಗಡೆಗೊಳಿಸಲಾಗಿತ್ತು.
ಕೈಯಲ್ಲಿ ಕಬ್ಬಿಣದ ಲಾಠಿಗಳು, ಖಡ್ಗ, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡಿದ ಕೆಲವರನ್ನು ಗುರುತಿಸಲಾಗಿತ್ತು.
ಕೆಂಪುಕೋಟೆಗೆ ನುಗ್ಗಿ ಹಿಂಸಾಚಾರ ನಡೆಸುವುದರ ಹಿಂದೆ ಇಂಥ ವ್ಯಕ್ತಿಗಳನ್ನೇ ಕೈವಾಡವಿರುವ ಬಗ್ಗೆ ಶಂಕಿಸಲಾಗಿತ್ತು.
ಸಿಖ್ ಧ್ವಜ ಹಾರಿಸಿದವರ ಬಗ್ಗೆ ಮಾಹಿತಿಗೆ 1 ಲಕ್ಷ ರೂ.
ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜದ ಎದುರಿಗೆ ನಿಶಾನ್ ಸಾಹೇಬ್ ಧ್ವಜ ಹಾರಿಸಿದ ಘಟನೆ ನಂತರ ಪಂಜಾಬಿ ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದಾರೆ. ಈ ಹಿನ್ನೆಲೆ ದೀಪ್ ಸಿಧು, ಜುಗರಾಜ್ ಸಿಂಗ್ ಹಾಗೂ ದೀಪ್ ಸಿಧು ಜೊತೆಗಿದ್ದ ಮತ್ತಿಬ್ಬರ ಪತ್ತೆಗೆ ಸಹಕರಿಸಿದರೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಜಜ್ಬೀರ್ ಸಿಂಗ್, ಬೂಟಾ ಸಿಂಗ್, ಸುಖದೇವ್ ಸಿಂಗ್ ಹಾಗೂ ಇಕ್ಬಾಲ್ ಸಿಂಗ್ ಎಂಬುವರ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರೂ ನಗದು ಬಹುಮಾನ ನೀಡುವ ಬಗ್ಗೆ ದೆಹಲಿ ಪೊಲೀಸರು ಘೋಷಣೆ ಮಾಡಿದ್ದಾರೆ.
ದೆಹಲಿ ಹಿಂಸಾಚಾರ ಸಂಬಂಧ 120 ಮಂದಿ ಬಂಧನ.
ನವದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 120ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. 40ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಬಂಧಿಸಿದ ಎಲ್ಲ ಆರೋಪಿಗಳ ಕುರಿತು ಮಾಹಿತಿ ಮತ್ತು ವಿಳಾಸವನ್ನು ಸಂಗ್ರಹಿಸಿದ್ದು, ಸೋಮವಾರ ಕೆಲವರನ್ನು ಬಿಡುಗಡೆಗೊಳಿಸಲಾಗಿದೆ. ಪತ್ರಕರ್ತ ರಾಜದೀಪ್ ಸರ್ ದೇಸಾಯಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧ ಕೂಡ ಎಫ್‌ಐಆರ್ ದಾಖಲಿಸಲಾಗಿದೆ.
32 ಜನರ ವಿರುದ್ಧ ಎಫ್‌ಐಆರ್, 20 ಜನರಿಗೆ ನೋಟಿಸ್.
ಹಿಂಚಾರಕ್ಕೆ ಸಂಬಂಧಿಸಿದಂತೆ 37 ರೈತ ಮುಖಂಡರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಸೇರಿದಂತೆ 20 ರೈತ ಮುಖಂಡರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ರಾಕೇಶ್ ತಿಕೈಟ್, ಮೇಧಾ ಪಾಟ್ಕರ್, ದರ್ಶನ್ ಪಾಲ್, ಗುರ್ನಾಮ್ ಸಿಂಗ್ ಚಾಂದುನಿ, ಕುಲ್ವಂತ್ ಸಿಂಗ್ ಸಂಧು, ಸತ್ನಾಮ್ ಸಿಂಗ್ ಪನ್ನು, ಜೋಗಿಂದರ್ ಸಿಂಗ್ ಉಗ್ರಹಾ, ಸರ್ಜಿತ್ ಸಿಂಗ್ ಫೂಲ್, ಜಗಜೀತ್ ಸಿಂಗ್ ದಾಲೇವಾಲ್, ಬಲ್ಬೀರ್ ಸಿಂಗ್ ರಾಜೇವಾಲ್, ಹರೀಂದರ್ ಸಿಂಗ್ ಲಖೇವಾಲ್ ಎಂಬ ರೈತ ಮುಖಂಡರ ವಿರುದ್ಧ ಕೊಲೆ ಯತ್ನ, ಗಲಭೆ ಮತ್ತು ಪಿತೂರಿ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರೈತರ ಶಾಂತಿಯುತ ಪ್ರತಿಭಟನೆಯ ಚಿತ್ರಣ ಬದಲು?
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ನವೆಂಬರ್.26ರಿಂದ ನಡೆಯುತ್ತಿದ್ದ ರೈತರ ಹೋರಾಟದ ಚಿತ್ರಣ ಒಂದೇ ದಿನದಲ್ಲಿ ತಿರುವು-ಮುರುವಾಯಿತು.
ಜನವರಿ.26ರಂದು ನಡೆದ 72ನೇ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು.
ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ಜಾಥಾಗೆ ಪೊಲೀಸರು ತಡೆದಿದ್ದು, ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಯಿತು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರು ಮತ್ತು ಪೊಲೀಸರ ನಡುವೆ ತೀವ್ರ ಸಂಘರ್ಷ ನಡೆಯಿತು. ಪ್ರತಿಭಟನಾನಿರತರಲ್ಲಿ ಕೆಲವರು ಖಡ್ಗ, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿದ ಘಟನೆ ನಡೆದಿತ್ತು. ಪ್ರತಿಭಟನಾಕಾರರ ಇನ್ನೊಂದು ಗುಂಪು ದೆಹಲಿ ಕೆಂಪುಕೋಟೆಯನ್ನು ನುಗ್ಗಿ ರಾಷ್ಟ್ರ ಧ್ವಜದ ಎದುರಿಗೆ ಸಿಖ್ ಧ್ವಜವನ್ನು ಹಾರಿಸಿತು.