ನವದೆಹಲಿ, ಜನವರಿ 29: ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಹೋರಾಟ ಮುಂದುವರೆಸಿರುವ ರೈತರನ್ನುದ್ದೇಶಿಸಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ರೈತರೇ ನಾವು ನಿಮ್ಮೊಂದಿಗಿದ್ದೇವೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಒಂದಿಂಚು ಕೂಡ ಹಿಂದೆ ಸರಿಯಬೇಡಿ. ನಿಮ್ಮ ಭೂಮಿಯನ್ನು ಅವರು ಕಸಿದುಕೊಳ್ಳಲು ಬಿಡಬೇಡಿ” ಎಂದು ಬೆಂಬಲ ವ್ಯಕ್ತಪಡಿಸಿದರು.
ನಮ್ಮ ಕೇಂದ್ರ ಸರ್ಕಾರ ಈಚೆಗೆ ಮೂರು ಕೃಷಿ ಕಾಯ್ದೆಗಳನ್ನು ಪರಿಚಯಿಸಿದೆ. ಮೊದಲನೇ ಕಾಯ್ದೆ ಮಂಡಿ ಪದ್ಧತಿಯನ್ನು ಹಾಳುಗೆಡವಿದರೆ, ಎರಡನೆಯದ್ದು ರೈತರನ್ನು ಕಡಿಮೆ ಬೆಲೆಗೆ ತಮ್ಮ ಬೆಳೆ ಮಾರಲು ಪ್ರೇರೇಪಿಸುತ್ತಿದೆ. ಮೂರನೆಯದು ರೈತರು ತಮಗೆ ಏನೇ ಸಂಕಷ್ಟ ಎದುರಾದರೂ ನ್ಯಾಯಾಲಯಕ್ಕೆ ಹೋಗದಂತೆ ತಡೆಯುತ್ತಿದೆ ಎಂದು ಕಾಯ್ದೆಗಳ ಕುರಿತು ಆರೋಪಿಸಿದರು.
ರೈತರ ಜೀವನಾಧಾರವನ್ನೇ ಸರ್ಕಾರ ಬುಡಮೇಲು ಮಾಡುತ್ತಿದೆ ಎನ್ನುವ ಕಾರಣಕ್ಕೆ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಮೊದಲು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.
ಜನವರಿ 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ರೈತರನ್ನು ಕೆಂಪು ಕೋಟೆ ಒಳಗೆ ಹೋಗಲು ಏಕೆ ಬಿಟ್ಟಿರಿ? ನಿಮ್ಮಿಂದ ಅವರನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ? ಇದು ಗೃಹ ಸಚಿವಾಲಯದ ಕಾರ್ಯನಿರ್ವಹಣೆ ಕೊರತೆ ಎಂದೂ ಹೇಳಬಹುದಲ್ಲವೇ? ಎಂದು ಪ್ರಶ್ನಿಸಿದರು.
ರೈತರ ಈ ಪ್ರತಿಭಟನೆ ಇಲ್ಲಿಗೇ ನಿಲ್ಲುವುದಿಲ್ಲ. ಹೋರಾಟ ನಿಲ್ಲಿಸಿ ಅವರು ಮನೆಗೆ ಮರಳುವುದಿಲ್ಲ ಎಂಬುದು ಸರ್ಕಾರಕ್ಕೆ ತಿಳಿಯಬೇಕು. ರೈತರ ಮೇಲೆ ದಾಳಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ. ಈ ಮೂಲಕ ಸಮಾಜ ವಿರೋಧಿ ಶಕ್ತಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.