ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 10 ಕೋಟಿ ಫಾಲೋವರ್ಸ್ ಅನ್ನು ಹೊಂದುವ ಮೂಲಕ, ಈ ವೇದಿಕೆಯಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಇಷ್ಟು ದೊಡ್ಡ ಸಂಖ್ಯೆಯ ಫಾಲೋವರ್ಸ್‌ಗಳನ್ನು ಬೇರಾವ ಕ್ರಿಕೆಟಿಗ ಹೊಂದಿಲ್ಲ ಎಂಬುದು ವಿಶೇಷ.
ಇದುವರೆಗೆ ನಾಲ್ಕು ಮಂದಿ ಕ್ರೀಡಾತಾರೆಗಳಷ್ಟೇ 10 ಕೋಟಿಗಿಂತ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (26.6 ಕೋಟಿ), ಅರ್ಜೆಂಟಿನಾದ ಲಿಯೊನೆಲ್ ಮೆಸ್ಸಿ (18.7), ಬ್ರೆಜಿಲ್‌ನ ನೇಯ್ಮರ್ (14.7) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ. ಈ ಮೂವರೂ ಫುಟ್‌ಬಾಲ್ ತಾರೆಗಳಾಗಿದ್ದಾರೆ.
ಪಾಪ್ ಸ್ಟಾರ್ ಡೆಮಿ ಲೊವೆಟೊ (9.9ಕೋಟಿ), ಪ್ರತಿಷ್ಠಿತ ಫುಟ್‌ಬಾಲ್ ಕ್ಲಬ್‌ಗಳಾದ ರಿಯಲ್ ಮ್ಯಾಡ್ರಿಡ್ (9.5 ಕೋಟಿ) ಮತ್ತು ಬಾರ್ಸಿಲೋನಾ ಎಫ್‌ಸಿಯನ್ನು (9.4 ಕೋಟಿ) ವಿರಾಟ್ ಹಿಂದಿಕ್ಕಿದ್ದಾರೆ.
ಕೊಹ್ಲಿ ಅವರನ್ನು ಆಧುನಿಕ ಕಾಲದ ಕ್ರಿಕೆಟ್‌ನ ಹೀರೊ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ವಾ ಇತ್ತೀಚೆಗೆ ಬಣ್ಣಿಸಿದ್ದರು.
ಎರಡನೇ ಸ್ಥಾನದಲ್ಲಿರುವ ತಾರೆಗೂ ಕೊಹ್ಲಿಗೂ 3.2 ಕೋಟಿ ಅಂತರ
ಭಾರತೀಯರ ಪೈಕಿ ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಜನಪ್ರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಎರಡನೇ ಸ್ಥಾನದಲ್ಲಿದ್ದಾರೆ. ಚೋಪ್ರಾ ಅವರನ್ನು 6.08 ಕೋಟಿ ಜನರು ಇನ್‌ಸ್ಟಾಗ್ರಾಂನಲ್ಲಿ ಹಿಂಬಾಲಿಸುತ್ತಾರೆ. ಹೀಗಾಗಿ ಫಾಲೋವರ್ಸ್‌ಗಳ ಸಂಖ್ಯೆಯಲ್ಲಿ ಸದ್ಯ 10 ಕೋಟಿ ಮೈಲಿಗಲ್ಲು ದಾಟಿರುವ ಕೊಹ್ಲಿಗೂ, ಚೋಪ್ರಾ ಅವರಿಗೂ ಬರೋಬ್ಬರಿ 3.2 ಕೋಟಿಗೂ ಹೆಚ್ಚು ಫಾಲೋವರ್ಸ್‌ಗಳ ಅಂತರವಿದೆ.