Sunday, May 28, 2023
Homeಕರಾವಳಿಗಗನಕ್ಕೇರಿದ ಡೀಸೆಲ್ ಬೆಲೆ: ಮತ್ಸ್ಯ ಬೇಟೆ ಸ್ಥಗಿತಗೊಳಿಸಿದ ಮೀನುಗಾರರು…

ಗಗನಕ್ಕೇರಿದ ಡೀಸೆಲ್ ಬೆಲೆ: ಮತ್ಸ್ಯ ಬೇಟೆ ಸ್ಥಗಿತಗೊಳಿಸಿದ ಮೀನುಗಾರರು…

- Advertisement -


Renault

Renault
Renault

- Advertisement -

ಕಾರವಾರ: ಬಿರು ಬೇಸಿಗೆಯನ್ನು ಲೆಕ್ಕಿಸದೆ ಮೀನುಗಾರಿಕೆಗೆ ತೆರಳಿ, ರಾಶಿ ರಾಶಿ ತಾಜಾ ಮೀನಿನ ಶಿಕಾರಿ ಮಾಡಿ ಬರುತ್ತಿದ್ದ ಮೀನುಗಾರರು ಇದೀಗ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಗಗನಕ್ಕೇರಿದ ಡೀಸೆಲ್ ಬೆಲೆಯಿಂದಾಗಿ ಖರ್ಚು ಭರಿಸಲಾಗದೇ ಬಹುತೇಕ ಬೋಟ್​ಗಳು ಲಂಗರು ಹಾಕಿದ್ದು, ಕಡಲ ಮಕ್ಕಳಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ಇತ್ತ ಯಾಂತ್ರಿಕ ಮೀನುಗಾರಿಕೆ ನಡೆಸುವ ಮೀನುಗಾರಿಕಾ ಬೋಟುಗಳಿಗೆ ಡೀಸೆಲ್ ಅತ್ಯಗತ್ಯ ಬೇಕಾಗಿದೆ.

ಸದ್ಯ ಜಿಲ್ಲೆಯಲ್ಲಿ ಡೀಸೆಲ್ ದರ 86.07 ರೂಪಾಯಿಗೆ ಏರಿಕೆಯಾಗಿದೆ. ನಿತ್ಯ ನೂರಾರು ಲೀಟರ್ ಡೀಸೆಲ್‌ನ ಮೀನುಗಾರಿಕೆಗೆ ವ್ಯಯಿಸುವ ಮೀನುಗಾರರಿಗೆ ಇದೀಗ ಡೀಸೆಲ್ ಬೆಲೆ ಕೈಸುಡುವಂತಾಗಿದೆ. ಮೀನುಗಾರಿಕೆ ನಡೆಸೋದೇ ಕಷ್ಟಕರವಾಗಿ ಪರಿಣಮಿಸಿದೆ.

ಸ್ಥಗಿತಗೊಂಡ ಮತ್ಸ್ಯ ಬೇಟೆ!

ಒಂದು ಬಾರಿಗೆ ಮೀನುಗಾರಿಕೆಗೆ ತೆರಳಲು 10ರಿಂದ 30 ಸಾವಿರ ರೂಪಾಯಿಯಷ್ಟು ಡೀಸೆಲ್‌ ಅಗತ್ಯವಿದೆ. ಅಷ್ಟು ಪ್ರಮಾಣದ ಮೀನುಗಳು ಸಿಗದೇ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ, ಕಾರವಾರ ಸೇರಿ ಕರಾವಳಿ ತಾಲೂಕುಗಳಲ್ಲಿ ಸಾಕಷ್ಟು ಮೀನುಗಾರರು ಬೋಟುಗಳನ್ನು ಬಂದರಿನಲ್ಲಿ ನಿಲ್ಲಿಸಿ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿದ್ದಾರೆ.

ಬೈತಖೋಲ ಬಂದರಿನಲ್ಲಿ ಟ್ರಾಲರ್ ಹಾಗೂ ಪರ್ಸಿನ್ ಸೇರಿ ಒಟ್ಟು 200ಕ್ಕೂ ಅಧಿಕ ಬೋಟುಗಳಿವೆ. ಜಿಲ್ಲೆಯ ಕರಾವಳಿಯಲ್ಲಿ ಸಾವಿರಕ್ಕೂ ಅಧಿಕ ಮೀನುಗಾರಿಕಾ ಬೋಟುಗಳಿವೆ. ಟ್ರಾಲರ್ ಬೋಟೊಂದು ಮೀನುಗಾರಿಕೆಗೆ ತೆರಳಲು ಒಂದು ನೂರು ಲೀಟರ್ ಡೀಸೆಲ್ ಅಗತ್ಯವಿದೆ. ಪರ್ಸಿನ್ ಬೋಟುಗಳಿಗೆ ಐನೂರು ಲೀಟರ್ ಡೀಸೆಲ್ ಅಗತ್ಯವಿದೆ.

ಹೀಗಾಗಿ ಮೀನುಗಾರಿಕೆ ನಡೆಸಲು ಡೀಸೆಲ್‌ಗೆ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ. ಉತ್ತಮ ಮೀನುಗಾರಿಕೆ ನಡೆಯದಿದ್ದಲ್ಲಿ ಹಾಕಿದ ಹಣವೂ ನಷ್ಟವಾಗುವ ಸ್ಥಿತಿಯಿದೆ ಅನ್ನೋದು ಮೀನುಗಾರರ ಅಭಿಪ್ರಾಯ. ಸರ್ಕಾರ ಮೀನುಗಾರರಿಗೆ ವಿವಿಧ ಯೋಜನೆಗಳನ್ನ ಘೋಷಿಸಿದ್ದಾಗಿ ಹೇಳುತ್ತಿದೆಯಾದರೂ ಯಾವೊಬ್ಬ ಮೀನುಗಾರರಿಗೂ ಇದರಿಂದ ಲಾಭವಾಗುತ್ತಿಲ್ಲ.

ಹೀಗಾಗಿ, ಡೀಸೆಲ್ ಬೆಲೆಯನ್ನೇ ಇಳಿಕೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಮೀನುಗಾರರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ನೆರವು ನೀಡಬೇಕು ಅಂತಾ ಮೀನುಗಾರರ ಮುಖಂಡರು ಮನವಿ ಮಾಡಿದ್ದಾರೆ. ಉತ್ತಮ ಮೀನುಗಾರಿಕೆ ಇಲ್ಲದೇ ಸಂಕಷ್ಟದಲ್ಲಿದ್ದ ಮೀನುಗಾರರಿಗೆ ಡೀಸೆಲ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದ್ದಂತೂ ಸತ್ಯ.

ಸದ್ಯ ಕೆಲ ಮೀನುಗಾರರು ಮಾತ್ರ ಮೀನುಗಾರಿಕೆ ನಡೆಸುತ್ತಿದ್ದು, ಸರ್ಕಾರ ನೆರವಿಗೆ ಬಾರದಿದ್ದಲ್ಲಿ ಕರಾವಳಿಯಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments