Tuesday, June 6, 2023
- Advertisement -


Renault

Renault
Renault

- Advertisement -

ಹಾಸನ (ಜ. 24): ಈಗಾಗಲೇ ಹಾಸನ ವಿಮಾನ ನಿಲ್ದಾಣಕ್ಕೆ 560 ಎಕರೆ ಭೂಮಿಯನ್ನು ವಶಕ್ಕೆ ಕೊಡಲಾಗಿದೆ. ಇಲ್ಲಿ ಅನೇಕ ಪ್ರವಾಸಿಗರು ಬರುತ್ತಾರೆ. ರೈತರ ಉತ್ಪನ್ನಗಳನ್ನು ಹಾಸನದಿಂದ ರಫ್ತು ಮಾಡಬಹುದು. ವೈಯಕ್ತಿಕವಾಗಿ ನನಗೆ ಏನೂ ಬೇಡ. ಆದರೆ, ಹಾಸನ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕಾಲದಲ್ಲಿ ಗಮನ ಕೊಡಿ ಎಂದು ಯಡಿಯೂರಪ್ಪ ಅವರ ಬಳಿ ಬಹಳ ಗೌರವದಿಂದ ಕೇಳಿಕೊಳ್ಳುತ್ತೇನೆ. ನನ್ನ ಜೀವಿತದ ಕೊನೆಯೊಳಗೆ ಯಡಿಯೂರಪ್ಪ ಅವರೇ ಹಾಸನದಲ್ಲಿ ವಿಮಾನ ನಿಲ್ದಾಣ ಓಪನ್ ಮಾಡಲಿ ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಮನವಿ ಮಾಡಿದ್ದಾರೆ.

ನನಗೆ ಮೇ ತಿಂಗಳಿಗೆ 88 ವರ್ಷ ತುಂಬುತ್ತದೆ. ಒಬ್ಬ ಮನುಷ್ಯ ಎಷ್ಟು ದಿನ ಇರಬಹುದು? ಯಡಿಯೂರಪ್ಪನವರ ಅಧಿಕಾರಾವಧಿ ಮುಗಿಯುವುದರೊಳಗೆ ನನಗೆ 90 ವರ್ಷ ಆಗಲಿದೆ. ಆ ನಂತರ ನನಗೆ ನಡೆಯಲು ಆಗುತ್ತೋ ಇಲ್ಲವೋ ಗೊತ್ತಿಲ್ಲ.

ಯಡಿಯೂರಪ್ಪ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಇರುತ್ತಾರೆ. ಅವರ ಬಗ್ಗೆ ನಾನು ಅಸೂಯೆ ಪಡುವುದಿಲ್ಲ. ಅವರ ಹಣೆಬರಹ ಚೆನ್ನಾಗಿದ್ದರೆ ಇನ್ನೊಂದು ಅವಧಿಗೆ ಬೇಕಾದರೂ ಸಿಎಂ ಆಗಲಿ. ಆದರೆ, ನನ್ನ ಜೀವಿತದ ಕೊನೆಯೊಳಗೆ ಯಡಿಯೂರಪ್ಪ ಅವರೇ ಹಾಸನದಲ್ಲಿ ವಿಮಾನ ನಿಲ್ದಾಣ ಓಪನ್ ಮಾಡಲಿ ಎಂದು ಹೆಚ್​.ಡಿ ದೇವೇಗೌಡರು ಹೇಳಿದ್ದಾರೆ. ಇದುವರೆಗೂ ಹಾಸನ ಜಿಲ್ಲೆಗೆ ಯಡಿಯೂರಪ್ಪ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ? ಎಂಬ ಬಗ್ಗೆ ಅವರೇ ಯೋಚನೇ ಮಾಡಲಿ. ನಾನು ಈ ಎಲ್ಲ ವಿಷ್ಯ ಚರ್ಚೆ ಮಾಡಲು ನಾಳೆ ಕೃಷ್ಣಾಕ್ಕೆ ಹೋಗಲಿದ್ದೇನೆ. ಯಡಿಯೂರಪ್ಪನವರ ಬಗ್ಗೆ ನಾನು ಸೇಡಿನಿಂದ ಮಾತನಾಡುತ್ತಿಲ್ಲ. ಅಧಿಕಾರದಲ್ಲಿದ್ದವರನ್ನು ಕೇಳುವುದು ನಮ್ಮ ಧರ್ಮ. ಈ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ, ನಾನು ಎಲ್ಲ ಪತ್ರ ಬರೆದಿದ್ದೇವೆ ಎಂದು ದೇವೇಗೌಡರು ತಿಳಿಸಿದ್ದಾರೆ.

ಹಾಸನದ ಅಭಿವೃದ್ಧಿ ಕೆಲಸ ಆಗದೇ ಇರುವ ಬಗ್ಗೆ ನನಗೆ ಬೇಸರವಿದೆ. ನಾವು ಅಧಿಕಾರದಲ್ಲಿದ್ದಾಗ ಬೆಂಗಳೂರು ಸಿಟಿಯಷ್ಟೇ ಅಲ್ಲ, ಎಲ್ಲ ಸಿಟಿಯನ್ನೂ ಸಮಾನವಾಗಿ ನೋಡಿಕೊಂಡಿದ್ದೇವೆ. ಹಾಸನದ ವಿಮಾನ ನಿಲ್ದಾಣ ಕಾಮಗಾರಿ, ಚನ್ನಪಟ್ಟಣ ಕೆರೆಯನ್ನು ಆಧುನಿಕವಾಗಿ ಅಭಿವೃದ್ಧಿ ಮಾಡಲು ಹೊರಟಿದ್ದು ಹಾಗೇ ಉಳಿದಿದೆ. ಬೇಲೂರಿನಿಂದ ಬಿಳಿಕೆರೆಗೆ ನಾಲ್ಕು ಪಥದ ರಸ್ತೆ ಹಾಗೇ ಉಳಿದಿದೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿ ಸರ್ಕಾರ ಮಾಡಿದಾಗ ಹಾಸನದಲ್ಲಿ ಐಐಟಿ ಮಾಡಲು ನಿರ್ಧರಿಸಲಾಗಿತ್ತು. ಈ ದೇಶದ ಪ್ರಧಾನಿಗಳು ಬಡವರೆಲ್ಲ ವಿಮಾನದಲ್ಲಿ ಓಡಾಡುವಂತೆ ಮಾಡುತ್ತೇನೆ ಎಂದರು. ಆದರೆ ಈಗೇನಾಗುತ್ತಿದೆ? ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

ನನ್ನ ರಾಜಕೀಯ ಜೀವನ ಮುಗಿಯುತ್ತಿದೆ. ನಮ್ಮ ಹಾಸನ ಜಿಲ್ಲೆ ಅಭಿವೃದ್ಧಿ ಆಗುವ ವಿಚಾರವಾಗಿ ಮೂರ್ನಾಲ್ಕು ಕಾರ್ಯಕ್ರಮಗಳು ಬಾಕಿ ಇವೆ. ಯಡಿಯೂರಪ್ಪನವರೇ ಬಂದು ಅಡಿಗಲ್ಲು ಹಾಕಲಿ. ನಾನು ಜೊತೆಯಲ್ಲಿ ಕುಳಿತುಕೊಳ್ಳುತ್ತೇನೆ. ಹಾಸನ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾನು ಮನವಿ ಮಾಡುತ್ತೇನೆ. ಹಾಸನದಲ್ಲಿ ಐಐಟಿ ವಿಚಾರವಾಗಿ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.ನಾವು ನಾಳೆ ಕೃಷ್ಣಾ ಎದುರು ಪ್ರತಿಭಟನೆ ಮಾಡುವುದಾಗಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆವು. ಆದರೆ ಅದಕ್ಕೆ ಪತ್ರದ ಮೂಲಕ ಯಡಿಯೂರಪ್ಪ ಉತ್ತರ ಕೊಟ್ಟಿದ್ದಾರೆ. ಹೀಗಾಗಿ, ನಾಳೆ ಪ್ರತಿಭಟನೆ ಮಾಡುವುದು ಬೇಡ ಎಂದುಕೊಂಡಿದ್ದೇವೆ. ಬಿಜೆಪಿ ಶಾಸಕರಿಗೆ ಅನುದಾನ ಕೊಟ್ಟು, ಬೇರೆಯವರಿಗೆ ಕೊಟ್ಟಿಲ್ಲ ಎಂದರೆ ಹೋರಾಟ ಮಾಡಬೇಕಾಗುತ್ತದೆ.ನಾಳೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿಕೊಡಬಹುದೆಂಬ ನಂಬಿಕೆ ಇದೆ. ಅವರನ್ನು ಭೇಟಿ ಮಾಡಿ ಈ ಎಲ್ಲ ವಿಚಾರ ಚರ್ಚೆ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments