ಮಂಗಳೂರು: ತೈಲ ಹಾಗೂ ಇತರ ಬೆಲೆಯೇರಿಕೆ ಬಿಸಿಯು ಸಾರಿಗೆ ವಲಯಕ್ಕೆ ತೀವ್ರವಾಗಿ ತಟ್ಟಿದ್ದು, ‘ಬಸ್‌ಗಳು ಮಾರಾಟಕ್ಕಿವೆ. ಆದರೆ, ಖರೀದಿಸುವವರೂ ಇಲ್ಲ’ ಎಂದು ಬಸ್ ಮಾಲೀಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಡೀಸೆಲ್, ಬಿಡಿಭಾಗಗಳು, ಲ್ಯೂಬ್ರಿಕೆಂಟ್, ಆಯಿಲ್ ಮತ್ತಿತರ ವಸ್ತುಗಳ ಬೆಲೆಯೇರಿಕೆ ಪರಿಣಾಮ ನಿರ್ವಹಣಾ ವೆಚ್ಚ ತೀವ್ರ ಏರಿಕೆಯಾಗಿದೆ. ಇತ್ತ ಪ್ರಯಾಣಿಕರ ಕೊರತೆ ಕಾರಣ ಆದಾಯವೂ ಕುಸಿದಿದೆ. ಹೀಗಾಗಿ, ದೇಶದಲ್ಲೇ ಹೆಸರು ಮಾಡಿದ್ದ ‘ಕೆನರಾ’ದ(ಅವಿಭಜಿತ ದಕ್ಷಿಣ ಕನ್ನಡ) ಖಾಸಗಿ ಬಸ್‌ಗಳು ಆರ್ಥಿಕ ನಷ್ಟಕ್ಕೆ ಒಳಗಾಗಿವೆ. ಆಗಾಗ್ಗೆ ಸಂಚಾರ (ಟ್ರಿಪ್) ಸ್ಥಗಿತಗೊಳಿಸುತ್ತಿವೆ.
‘ನಮ್ಮಲ್ಲಿ ಹಲವರು ಬಸ್ ಮಾರಾಟಕ್ಕೆ ಸಿದ್ಧರಾಗಿದ್ದಾರೆ. ಆದರೆ, ನಷ್ಟ ಮಾಡಿಕೊಂಡು ಖರೀದಿಸುವವರು ಬೇಕಲ್ಲ’ ಎಂದು ಕೆನರಾ ಬಸ್ ಮಾಲೀಕರ ಅಸೋಸಿಯೇಶನ್ ಅಧ್ಯಕ್ಷ ರಾಜವರ್ಮ ಬಲ್ಲಾಳ ಪ್ರತಿಕ್ರಿಯಿಸಿದ್ದಾರೆ.
‘ಕೆಲವರು ಈಗಾಗಲೇ ಮಾರಿದ್ದಾರೆ. ಇನ್ನೂ ಹಲವರು ಮಾರಾಟ ಮಾಡಲು ಸಿದ್ಧರಾಗಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಟಿ ಬಸ್:
ಮಂಗಳೂರು ನಗರದಲ್ಲಿ ಸುಮಾರು 325 ಖಾಸಗಿ ಸಿಟಿ ಬಸ್‌ಗಳಿವೆ. ಲಾಕ್‌ಡೌನ್ ಸಂದರ್ಭದಲ್ಲಿ 65ಕ್ಕೂ ಹೆಚ್ಚು ದಿನಗಳು ರಸ್ತೆಗೆ ಇಳಿದಿರಲಿಲ್ಲ. ಜೂನ್ 1ರಿಂದ ರಸ್ತೆಗಿಳಿದರೂ, ಪ್ರಯಾಣಿಕರ ಕೊರತೆಯಿಂದ ದಿನಕ್ಕೆ ಸರಾಸರಿ 8ರಷ್ಟು ಇದ್ದ ಟ್ರಿಪ್‌ಗಳನ್ನು ಐದರಿಂದ ಆರಕ್ಕೆ ಸೀಮಿತಗೊಳಿಸಿದ್ದವು. ಈಗಲೂ ಜನಸಂಚಾರ ಚೇತರಿಸಿಲ್ಲ.
ಆದರೆ, 2020ರ ಜೂನ್ 1ರಂದು ₹65.25 ಇದ್ದ ಡೀಸೆಲ್ ಬೆಲೆಯು, ಫೆ.17ಕ್ಕೆ ₹84ಕ್ಕೆ ಏರಿಕೆಯಾಗಿದೆ. ಕೇವಲ ಎಂಟೂವರೆ ತಿಂಗಳಲ್ಲಿ ಪ್ರತಿ ಲೀಟರ್‌ಗೆ ₹18.75 ಹೆಚ್ಚಳವಾಗಿದೆ.
‘ಒಂದು ಬಸ್‌ಗೆ ದಿನಕ್ಕೆ ಸುಮಾರು 65 ಲೀಟರ್ ಡೀಸೆಲ್ ಬೇಕು. ದಿನವೊಂದಕ್ಕೆ ₹1,250ರಷ್ಟು ಡೀಸೆಲ್ ಖರ್ಚು ಏರಿಕೆಯಾಗಿದೆ. ಪ್ರತಿ ಬಸ್‌ನ ಶೇ75ರಷ್ಟು ಆದಾಯ ಡೀಸೆಲ್‌ಗೆ ಹೋಗುತ್ತಿದೆ. ಉಳಿದ ಹಣದಲ್ಲಿ ಎಲ್ಲವನ್ನೂ ನಿರ್ವಹಿಸಬೇಕಾಗಿದೆ. ಹೀಗಾಗಿ, ಹಲವರು ಮಾರಾಟಕ್ಕೆ ಮುಂದಾಗಿದ್ದಾರೆ’ ಎಂದು ದಿಲ್‌ರಾಜ್ ಆಳ್ವ ನೋವು ತೋಡಿಕೊಂಡರು.
‘ಮೂರು ತಿಂಗಳು ಮುಂಗಡವಾಗಿ ತೆರಿಗೆ ಪಾವತಿಸಬೇಕು. ಹೀಗಾಗಿ, ಟ್ರಿಪ್ ಕಡಿಮೆ ಮಾಡಿದರೆ ನಮಗೇ ನಷ್ಟ. ಆದರೆ, ಭಾರಿ ನಷ್ಟಕ್ಕಿಂತ ಕಡಿಮೆ ನಷ್ಟದ ಮೊರೆ ಹೋಗುತ್ತಿದ್ದೇವೆ’ ಎಂದು ಮಾಲೀಕರೊಬ್ಬರು ತಿಳಿಸಿದರು.
ಟೋಲ್:
ಬಹುತೇಕ ನಗರಗಳಲ್ಲಿ ಟೋಲ್‌ಗೇಟ್‌ಗಳು ನಗರ ವ್ಯಾಪ್ತಿಯ ಹೊರಗೆ ಇರುತ್ತವೆ. ಆದರೆ, ಮಂಗಳೂರಿನಲ್ಲಿ ಮಾತ್ರ ಅವೈಜ್ಞಾನಿಕವಾಗಿವೆ. ಹೆಜಮಾಡಿಯಲ್ಲಿ ಟೋಲ್‌ಗೇಟ್ ಇದ್ದರೂ, ಸುರತ್ಕಲ್‌ನಲ್ಲಿ ನಿರ್ಮಿಸಿದ್ದಾರೆ. ಇತ್ತ ತಲಪಾಡಿಯಲ್ಲಿ ಅಂತರರಾಜ್ಯ ಗಡಿಯ, ಬಹಳಷ್ಟು ಒಳಗಡೆ ನಿರ್ಮಿಸಿದ್ದಾರೆ. ಇವೆರಡೂ ಅವೈಜ್ಞಾನಿಕವಾಗಿದ್ದು, ಹೊರೆಯು ಬಸ್‌ಗಳ ಮೇಲೆ ಬೀಳುತ್ತಿವೆ.
ನೌಕರರ ಸಂಕಷ್ಟ:
‘ಲಾಕ್‌ಡೌನ್‌ನ ಸುಮಾರು 65 ದಿನ ಖಾಸಗಿ ಸಾರಿಗೆ ವಲಯದ ಚಾಲಕ, ನಿರ್ವಾಹಕ, ಕ್ಲೀನರ್‌ಗಳಿಗೆ ಕೆಲಸ ಇರಲಿಲ್ಲ. ಆ ಬಳಿಕ ಪರ್ಯಾಯ ದಿನಗಳಲ್ಲಿ ಮಾತ್ರ ಕೆಲಸ ಇತ್ತು. ಈಗಲೂ ಪೂರ್ಣ ಪ್ರಮಾಣದಲ್ಲಿ ಕೆಲಸ ಇಲ್ಲ. ಆದರೆ, ಸರ್ಕಾರದಿಂದ ಯಾವುದೇ ಪರಿಹಾರ ಅಥವಾ ನೆರವು ಸಿಕ್ಕಿಲ್ಲ’ ಎನ್ನುತ್ತಾರೆ ಚಾಲಕ ನಾರಾಯಣ.
‘ಈ ಎಲ್ಲ ಹೊರೆಯನ್ನು ಟಿಕೆಟ್ ದರ ಏರಿಕೆ ಮೂಲಕ ಪ್ರಯಾಣಿಕರಿಗೆ ವರ್ಗಾಯಿಸಬೇಕಾಗುತ್ತದೆ. ಇದು ಅನಿವಾರ್ಯ. ಅಂತಿಮವಾಗಿ ಮತ್ತಷ್ಟು ಬೆಲೆಯೇರಿಕೆಗೆ ಕಾರಣವಾಗುತ್ತದೆ. ಅದಕ್ಕಾಗಿ ತೈಲ ಬೆಲೆ, ತೆರಿಗೆ ಹಾಗೂ ದರಗಳನ್ನು ಬಜೆಟ್‌ನಲ್ಲಿ ಇಳಿಕೆ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದು ರಾಜವರ್ಮ ಬಲ್ಲಾಳ ತಿಳಿಸಿದರು.
‘ಬೆಲೆಯೇರಿಕೆ, ಪುಕ್ಕಟೆ ಸಲಹೆ’:
‘ಬೆಲೆಯೇರಿಕೆ ಪರಿಣಾಮ ಸಾರಿಗೆ ವಲಯ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೇ ನಂಬಿಕೊಂಡಿದ್ದ ಚಾಲಕ, ನಿರ್ವಾಹಕ, ಕ್ಲೀನರ್, ಮೆಕ್ಯಾನಿಕ್ ಮತ್ತಿತರರ ಬದುಕೂ ಬರ್ಬರವಾಗಿದೆ. ಈ ಬಗ್ಗೆ ಸರ್ಕಾರ ಸ್ಪಂದಿಸಬೇಕು’ ಎಂದು ಮುಖಂಡ ವಿಶ್ವಾಸ್ ದಾಸ್ ಒತ್ತಾಯಿಸಿದರು.
‘ಎಲೆಕ್ಟ್ರಿಕಲ್, ಬಯೋಡೀಸೆಲ್ ಮತ್ತಿತರ ಪರ್ಯಾಯ ಇಂಧನದ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಮಾಡಿಲ್ಲ. ಕನಿಷ್ಠ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಲ್ಲ. ಆದರೆ, ಪರ್ಯಾಯ ಇಂಧನ ಬಳಸಿ ಎಂದು ಕೇಂದ್ರ ಸಚಿವರು ಪುಕ್ಕಟೆ ಸಲಹೆ ನೀಡಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಅವರು ದೂರಿದರು.