ವಾರದೊಳಗೆ ಗೆಜ್ಜೆಗಿರಿಯಲ್ಲಿ ಪ್ರಶ್ನಾಚಿಂತನೆ…!!!
ಪುತ್ತೂರು: ವಿವಾದಗಳ ಕೇಂದ್ರ ಬಿಂದುವಾಗಿರುವ ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಕ್ಷೇತ್ರಾಡಳಿತ ಸಮಿತಿ ಮತ್ತು ಕ್ಷೇತ್ರದ ಮಾಲೀಕತ್ವದ ನಡುವೆ ಉಂಟಾದ ಭೂ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು ಕ್ಷೇತ್ರಾಡಳಿತ ಸಮಿತಿಯಿಂದ ಕ್ಷೇತ್ರದ ತಂತ್ರಿಯವರ ಬದಲಾವಣೆಯನ್ನು ಮಾಡಿದೆ.
ಫೆ.12ರಂದು ಸಂಕ್ರಮಣ ದಿನದ ವಿಶೇಷ ಪೂಜೆಯ ಸಮಯದಲ್ಲಿ ಕ್ಷೇತ್ರಕ್ಕೆ ಹೊಸ ತಂತ್ರಿಯವರಾದ ಮೂಡಬಿದ್ರೆಯ ಶಿವಾನಂದ ಶಾಂತಿಯವರನ್ನು ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ತಂತ್ರಿಯಾಗಿದ್ದ ಲೋಕೇಶ್ ಶಾಂತಿಯವರ ಮೇಲೆ ಭಕ್ತಾಧಿಗಳಿಂದ ಮತ್ತು ಸಮಿತಿಯವರಿಂದ ವಿವಿಧ ರೀತಿಯ ಆರೋಪ ಇರುವ ಕಾರಣ ಇವರನ್ನು ಬದಲಾವಣೆ ಮಾಡಿ ಅವರ ಸ್ಥಾನಕ್ಕೆ ಶಿವಾನಂದ ಶಾಂತಿಯವರನ್ನು ನೇಮಕ ಮಾಡಿಕೊಳ್ಳಲಾಯಿತು. ಈ ನಡುವೆ ಕ್ಷೇತ್ರದಲ್ಲಿ ಮಾತಿನ ಚಕಮಕಿಯೂ ನಡೆಯಿತು. ಕೊನೆಗೆ ಸತ್ಯಧರ್ಮ ಚಾವಡಿಯಲ್ಲಿ ಪೂಜೆಯ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಒಂದು ವಾರದೊಳಗೆ ಕ್ಷೇತ್ರದಲ್ಲಿ ಸೂಕ್ತ ದೈವಜ್ಞರಿಂದ ಪ್ರಶ್ನಾ ಚಿಂತನೆ ಮಾಡುವುದು ಮತ್ತು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಮುಂದಿನ ಕೆಲಸ ಕಾರ್ಯಗಳನ್ನು ನಡೆಸುವುದು ಎಂದು ನಿರ್ಣಯಿಸಲಾಯಿತು.
ಲೋಕೇಶ್ ಶಾಂತಿಯ ಸ್ಥಾನಕ್ಕೆ ಶಿವಾನಂದ ಶಾಂತಿ
ಗೆಜ್ಜೆಗಿರಿಯ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂದರ್ಭದಿಂದ ವೈಧಿಕ ಕಾರ್ಯಕ್ರಮಗಳನ್ನು ನಡೆಸಲು ಕ್ಷೇತ್ರದ ತಂತ್ರಿಯಾಗಿ ಲೋಕೇಶ್ ತಂತ್ರಿಯವರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಕೂಡ ನಡೆದಿದ್ದವು. ಇದೀಗ ಲೋಕೇಶ್ ತಂತ್ರಿಯವರ ಮೇಲೆ ಭಕ್ತಾಧಿಗಳಿಂದ ವಿವಿಧ ರೀತಿಯ ಆರೋಪಗಳು ಕೇಳಿಬಂದಿದ್ದು ಅಲ್ಲದೆ ಇವರನ್ನು ಬದಲಾಯಿಸಬೇಕು ಎಂದು ಕ್ಷೇತ್ರಾಡಳಿತ ಸಮಿತಿಯ ಮೇಲೆ ಭಕ್ತರು ವಿನಂತಿಸಿಕೊಂಡಿದ್ದರಿಂದ ಅವರನ್ನು ಬದಲಾಯಿಸಿ ಅವರ ಸ್ಥಾನಕ್ಕೆ ಶಿವಾನಂದ ಶಾಂತಿಯವರನ್ನು ನೇಮಕ ಮಾಡಿಕೊಂಡಿದೆ. ಕ್ಷೇತ್ರದ ಎಲ್ಲಾ ಸಾನಿಧ್ಯಗಳ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ತಂತ್ರಿ/ಅರ್ಚಕರನ್ನಾಗಿ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ ಎಂದು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ತಿಳಿಸಿದ್ದಾರೆ. ಈ ನೇಮಕಾತಿಯು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿದ್ದು ಸಮಿತಿಯ ನೀತಿ ಸಂಹಿತೆಗೆ ಒಳಪಟ್ಟು ಕರ್ತವ್ಯ ನಿರ್ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ವಾರದೊಳಗೆ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ
ಗೆಜ್ಜೆಗಿರಿ ಕ್ಷೇತ್ರದಲ್ಲಿ ಕ್ಷೇತ್ರಾಡಳಿತ ಸಮಿತಿ ಮತ್ತು ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿಯವರ ನಡುವೆ ಉಂಟಾದ ಭೂ ವಿವಾದ ನ್ಯಾಯಾಲಯದ ಕಟಕಟೆಯಲ್ಲಿದ್ದು ತನಿಖೆ ನಡೆಯುತ್ತಿದೆ. ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿಯವರು ಕ್ಷೇತ್ರಾಡಳಿತ ಸಮಿತಿಗೆ ಕ್ಷೇತ್ರದ ತನ್ನ ಜಾಗವನ್ನು ಬರೆದುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿದ್ದು ನ್ಯಾಯಾಂಗ ತನಿಖೆ ನಡೆಯುತ್ತಿದೆ.
ಕ್ಷೇತ್ರದ ಬಗ್ಗೆ ಭಕ್ತರಲ್ಲೂ ವಿವಿಧ ರೀತಿಯ ಗೊಂದಲಗಳು ಮೂಡಿದ್ದು ಈ ಎಲ್ಲಾ ಗೊಂದಲಗಳಿಗೆ ಮುಕ್ತಿ ನೀಡಲು ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ ನಡೆಸುವುದು ಸೂಕ್ತ ಎಂದು ಸಮಿತಿಯವರು ದೇಯಿ ಬೈದೆತಿ ಎದುರಲ್ಲಿ ಭಿನ್ನಯಿಸಿಕೊಂಡರು. ಇದಕ್ಕೆ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿಯವರು ಕೂಡ ಒಪ್ಪಿಗೆ ಸೂಚಿಸಿದರು. ಅದರಂತೆ ಕ್ಷೇತ್ರ ಬ್ರಹ್ಮಕಲಶೋತ್ಸವ ನಡೆದು ಒಂದು ವರ್ಷವಾಗುತ್ತ ಬಂದಿದ್ದು ಮುಂದಿನ ತಿಂಗಳಲ್ಲಿ ಪ್ರತಿಷ್ಠಾ ದಿನ,ನೇಮೋತ್ಸವ, ಜಾತ್ರೋತ್ಸವ ನಡೆಯಲಿದೆ.
ಇದಕ್ಕೆ ಮೊದಲ ವಾರದೊಳಗೆ ಕ್ಷೇತ್ರದಲ್ಲಿ ಸೂಕ್ತ ದೈವಜ್ಞರನ್ನು ಕರೆದು ಪ್ರಶ್ನಾ ಚಿಂತನೆ ನಡೆಸುವುದು ಎಂದು ತೀರ್ಮಾನಿಸಲಾಯಿತು. ದೈವಜ್ಞರು ಯಾರು ಎಂಬ ಪ್ರಶ್ನೆಗೆ ಶ್ರೀಧರ ಪೂಜಾರಿಯವರು ಈ ಹಿಂದೆ ಕ್ಷೇತ್ರದ ಬಗ್ಗೆ ಅಷ್ಟಮಂಗಳ ಪ್ರಶ್ನೆ ಚಿಂತನೆ ನಡೆಸಿದ ದೈವಜ್ಞರನ್ನೆ ಕರೆಸುವುದು ಸೂಕ್ತ ಅವರನ್ನು ಕೈ ಬಿಡುವುದು ಸರಿಯಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಮಿತಿಯವರು ಮುಂದಿನ ದಿನದಲ್ಲಿ ಈ ಬಗ್ಗೆ ಚಿಂತನೆ ನಡೆಸಿ ಸೂಕ್ತವೆನಿಸಿದ ದೈವಜ್ಞರನ್ನು ಕರೆಸಿ ಒಂದು ದಿನದ ಪ್ರಶ್ನೆ ಇಟ್ಟು ಕ್ಷೇತ್ರದ ದೋಷ, ಬಾಧೆಗಳಿಗೆ ಮುಕ್ತಿ ಕೊಡಿಸುವ ಬಗ್ಗೆ ಚಿಂತನೆ ನಡೆಸುವುದು ಎಂದು ತಿಳಿಸಿದರು.
ಮಾತಿನ ಚಕಮಕಿ, ಹೊಯಿ ಕೈ
ಫೆ.12 ಸಂಕ್ರಮಣ ದಿನವಾಗಿದ್ದರಿಂದ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆಯು ಹೆಚ್ಚಿತ್ತು. ರಾತ್ರಿಯಿಂದಲೇ ಕ್ಷೇತ್ರದಲ್ಲಿ ಭಕ್ತರು ಹೆಚ್ಚಿದ್ದರು. ಬೆಳಗ್ಗೆಯೇ ಕ್ಷೇತ್ರಕ್ಕೆ ಆಗಮಿಸಿ ಕ್ಷೇತ್ರಾಡಳಿತ ಸಮಿತಿಯವರು ನೂತನ ತಂತ್ರಿಗಳಾದ ಶಿವಾನಂದ ಶಾಂತಿಯವರನ್ನು ಬರಮಾಡಿಕೊಂಡರು. ಕ್ಷೇತ್ರದ ಕಛೇರಿಯಲ್ಲಿ ಪೂಜೆ ನಡೆಸಿದ ತಂತ್ರಿಯವರು ಮುಂದಿನ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಪ್ರಾರ್ಥನೆ ಸಲ್ಲಿಸಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್‌ರವರಿಗೆ ಪ್ರಸಾದ ನೀಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಳ್ಳ ಎಂಬ ಪದ ಬಳಕೆಯಿಂದ ಒಂದಿಬ್ಬರ ಮಧ್ಯೆ ಹೊಕೈ ನಡೆದ ಘಟನೆಯೂ ನಡೆಯಿತು. ಇದಲ್ಲದೆ ಪೂಜೆಯ ಕೊನೇ ಕ್ಷಣದಲ್ಲಿ ಮಾತಿನ ಚಕಮಕಿಯೂ ನಡೆಯಿತು.
ನನ್ನ ಮನೆ ದೇವರು, ಎಲ್ಲವೂ ನನಗೆ ಸೇರಿದ್ದು ಎಂಬಂತೆ ವರ್ತಿಸಿ, ಹಣ ಮಾಡುವ ದುರಾಸೆಯಿಂದ ಕ್ಷೇತ್ರಾಡಳಿತ ಸಮಿತಿಯ ಮೇಲೆ ದಾವೆ ದೂಡಿದ್ದು ಅಲ್ಲದೆ ನಮ್ಮನ್ನು ಕ್ಷೇತ್ರಕ್ಕೆ ಬರದಂತೆ ತಡೆಯೊಡ್ಡಿದ್ದು ಅಲ್ಲದೆ ಬೆಂಬಲಿಗರೊಂದಿಗೆ ಸೇರಿ ನಮಗೆ ಹಲ್ಲೆ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇದಕ್ಕೆ ಬೆಂಬಲ ನೀಡುತ್ತಿದ್ದವರು ಕ್ಷೇತ್ರದ ತಂತ್ರಿಯವರಾದ ಲೋಕೇಶ್ ಶಾಂತಿ ಎಂಬವರು. ಇವರನ್ನು ಕಾರ್ಯಕಾರಿ ಸಮಿತಿಯಿಂದ ಈ ಹಿಂದೆಯೇ ವಜಾ ಮಾಡಲಾಗಿದೆ. ಇದೀಗ ಕ್ಷೇತ್ರಾಡಳಿತ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯವರು ಸೇರಿಕೊಂಡು ಕ್ಷೇತ್ರದ ಎಲ್ಲಾ ವೈಧಿಕ ಕಾರ್ಯಗಳಿಗೆ ಮೂಡಬಿದ್ರೆ ಶಿವಾನಂದ ಶಾಂತಿಯವರನ್ನು ನೇಮಕ ಮಾಡಿದೆ. ಮುಂದಿನ ಮಹಾಸಭೆಯಲ್ಲಿ ಪೂರ್ಣಾವಧಿಗೆ ತಂತ್ರಿಯರ್ವರನ್ನಾಗಿ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ
ಜಯಂತ ನಡುಬೈಲ್ ತಿಳಿಸಿದ್ದಾರೆ.