ಕೊರೊನಾ ಆರ್ಥಿಕ ಸಂಕಷ್ಟ ಜನರಿಗೆ ಮಾತ್ರ…
ಸಚಿವರ ಹೊಸ ಕಾರು ಖರೀದಿಗೆ ಸರ್ಕಾರದ ಕೋಟಿ ಕೋಟಿ ಹಣ…!!!
ಬೆಂಗಳೂರು: ಕೊರೊನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ಅನೇಕ ಮೂಲಬೂತ ಅಭಿವೃದ್ಧಿ ಕಾರ್ಯಗಳಿಗೂ ಕೂಡ ಅನುದಾನವನ್ನು ಕಡಿತಗೊಳಿಸಲಾಗಿದೆ. ಆದರೆ ನಮ್ಮ ಜನಪ್ರತಿನಿಧಿಗಳ ದುಂದುವೆಚ್ಚಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ಕೊರೊನಾ ವೈರಸ್ ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯದ ಸಚಿವರು ಹಾಗೂ ಸಂಸದರು ಐಷಾರಾಮಿ ಹೊಸ ಕಾರು ಕೊಳ್ಳಲು ಖರೀದಿಯ ಮೊತ್ತವನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದೆ. ಆ ಮೂಲಕ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದರೂ ಕ್ಯಾರೆ ಎನ್ನದೇ, ನಮಗೇನು ಸಂಬಂಧವೇ ಇಲ್ಲ ಎಂಬಂತೆ ಸರ್ಕಾರ ಹೊಸ ಆದೇಶ ಮಾಡಿದೆ.
ಸಚಿವರು ಹಾಗೂ ರಾಜ್ಯದ ಎಲ್ಲ ಸಂಸದರು ಹೊಸ ಕಾರು ಖರೀದಿ ಮಾಡಲು 23 ಲಕ್ಷ ರೂಪಾಯಿ ನೀಡಲು ಸರ್ಕಾರ ಸಮ್ಮತಿಸಿದೆ. ಹೀಗಾಗಿ ರಾಜ್ಯದ ಎಲ್ಲಾ ಸಚಿವರು, ಸಂಸದರು ಕಾರು ಖರೀದಿ ಮಾಡಲು ಇನ್ಮುಂದೆ ಸರ್ಕಾರದಿಂದ 23 ಲಕ್ಷ ರೂ. ಗಳನ್ನು ಪಡೆಯಲು ಅವಕಾಶವಿದೆ. ಈ ಹಿಂದೆ ಕಾರು ಖರೀದಿಗೆ ನೀಡುತ್ತಿದ್ದ ಮೊತ್ತವನ್ನು ಹೆಚ್ಚಳ ಮಾಡಲು ಸಚಿವರು, ಸಂಸದರಿಂದ ಒತ್ತಡ ಬಂದಿತ್ತು. ಹೀಗಾಗಿ ಸಚಿವರು ಮತ್ತು ಸಂಸದರ ಒತ್ತಡಕ್ಕೆ ಮಣಿದ ಸರ್ಕಾರದಿಂದ ಹೊಸ ಕಾರು ಖರೀದಿಗೆ 23 ಲಕ್ಷ ರೂ. ಅನುದಾನ ಬಿಡುಗಡೆಗೆ ಒಪ್ಪಿಕೊಂಡಿದೆ. ಈ ಮೊದಲು ಹೊಸ ಕಾರು ಖರೀದಿಗೆ 22 ಲಕ್ಷ ರೂ. ಗಳನ್ನು ನೀಡುತ್ತಿದ್ದ ರಾಜ್ಯ ಸರ್ಕಾರ ನೀಡುತ್ತಿತ್ತು.
ಇದೀಗ ರಾಜ್ಯದ 33 ಸಚಿವರು (ಸಿಎಂ ಹೊರತು ಪಡಿಸಿ) ಹಾಗೂ 28 ಸಂಸದರು ಹೊಸ ಐಷಾರಾಮಿ ಕಾರುಗಳನ್ನು ಕೊಳ್ಳಬಹುದಾಗಿದೆ. ಅದಕ್ಕೆ ಸರ್ಕಾರ ತಲಾ 23 ಲಕ್ಷ ರೂಪಾತಿಗಳನ್ನು ಒದಗಿಸಲಿದೆ. ಒಮ್ಮೆಲೆ ಎಲ್ಲ ಸಚಿವರು ಹಾಗೂ ಸಂಸದರು ಐಶಾರಾಮಿ ಕಾರುಗಳನ್ನು ಖರೀದಿ ಮಾಡಿದಲ್ಲಿ ಸುಮಾರು 14 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ವ್ಯಯಿಸಲಬೇಕಾಗುತ್ತದೆ.
ಮೊದಲೇ ಕೊರೊನಾ ವೈರಸ್ ಸಂಕಷ್ಟದಿಂದ ಮಕ್ಕಳ ಶಾಲಾ ಶುಲ್ಕವನ್ನು ಕಟ್ಟಲು ಜನರು ಪರದಾಡುತ್ತಿದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳು ಮಾತ್ರ ತಮ್ಮ ಐಷಾರಾಮಿ ಬದುಕಿನಿಂದ ಹೊರಗೆ ಬರಲು ಒಪ್ಪಿಲ್ಲ. ಒಂದು ವರ್ಷದ ಮಟ್ಟಿಗೆ ಕಾರು ಖರೀದಿ ಮುಂದಕ್ಕೆ ಹಾಕಿದ್ದರೆ ಏನೂ ಆಗುತ್ತಿರಲಿಲ್ಲ ಎಂಬುದು ಜನರ ಹೇಳಿಕೆಯಾಗಿದೆ. ಆದರೆ ಅದನ್ನು ಕೇಳಿಸಕೊಳ್ಳುವವರು ಯಾರು?