ಅಹ್ಮದಾಬಾದ್: ಗುಜರಾತ್‌ನ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದಿದ್ದ ಮತದಾನದ ಫಲಿತಾಂಶ ಹೊರಬಿದ್ದಿದೆ.
ಅಹ್ಮದಾಬಾದ್ ಹಾಗೂ ಇತರ ಐದು ಮಹಾನಗರ ಪಾಲಿಕೆಗಳ ಒಟ್ಟು 576 ಸ್ಥಾನಗಳಿಗೆ ಫೆ. 21ರಂದು ಚುನಾವಣೆ ನಡೆದಿತ್ತು. ಫೆ. 23ರ ಬೆಳಗ್ಗೆಯಿಂದ ನಡೆದ ಮತಗಣನೆ ತಾಂತ್ರಿಕ ಕಾರಣಗಳಿಂದ ರಾತ್ರಿಯಾದರೂ ಮುಕ್ತಾಯವಾಗಿರಲಿಲ್ಲ. ರಾತ್ರಿ 8 ಗಂಟೆಯ ಹೊತ್ತಿಗೆ ಸಿಕ್ಕ ಫಲಿತಾಂಶ ವರದಿಗಳನ್ವಯ, ಬಿಜೆಪಿ 449 ಸ್ಥಾನಗಳನ್ನು ಗೆದ್ದಿದೆ. ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ 43 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ.
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ 27 ಸೀಟುಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದೆ. ಅಹ್ಮದಾಬಾದ್, ರಾಜ್‌ಕೋಟ್, ಜಾಮ್‌ನಗರ್, ಭಾವ್‌ನಗರ್, ವಡೋದರಾ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದು ಸ್ಪಷ್ಟವಾಗಿತ್ತು.
ಹಾಗೆಯೇ ಇದೇ ಮೊದಲ ಬಾರಿಗೆ ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ 21 ಸೀಟುಗಳ ಪೈಕಿ ಏಳು ಸೀಟುಗಳಲ್ಲಿ ಗೆದ್ದಿದೆ.
ಫಲಿತಾಂಶದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಸಿಎಂ ವಿಜಯ್ ರುಪಾಣಿ, ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.