ನವದೆಹಲಿ (ಮಾ. 01): ಒಂದೆಡೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಂಡಕಾರುತ್ತಾರೆ. ಮತ್ತೊಂದೆಡೆ ಅದೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಿದ್ದರಾಮಯ್ಯನವರನ್ನ ಗುಣಗಾನ ಮಾಡಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದ್ದಾರೆ.
ಹೌದು… ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ವಿಧಾನಸಭೆಯ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು (ಸೋಮವಾರ) ದೆಹಲಿಯಲ್ಲಿ ತಮ್ಮ ಮೊಮ್ಮಗ, ಸಂಸದ ಪ್ರಜ್ವಲ್ ರೇವಣ್ಣ ಅವರ ಗೃಹ ಪ್ರವೇಶ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು ಅವರು, ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಈಗ ಆ ಪಕ್ಷದ ಹಿರಿಯ ನಾಯಕರು ಬಂಡೆದ್ದಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಗುಲಾಂ ನಭಿ ಆಜಾದ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆ ಚೆನ್ನಾಗಿದ್ದಾರೆ. ಈ ಹಿರಿಯ ನಾಯಕರು ಬದಿಗೆ ಸರಿದ ಬಳಿಕ ಕಾಂಗ್ರೆಸ್ ಅನ್ನು ಸದೃಢಗೊಳಿಸಲು ಸಿದ್ದರಾಮಯ್ಯ ಅವರಂತಹ ನಾಯಕರ ಅಗತ್ಯ ಇದೆ ಎಂದು ಹೇಳಿದರು.
ಕಾಂಗ್ರೆಸ್ ನೆರಳಿನಲ್ಲಿರುವ ಸಿದ್ದು, ಸ್ವಂತ ಪಕ್ಷ ಕಟ್ಟಿ ಚುನಾವಣೆ ನಡೆಸಲಿ: ಹೆಚ್‌ಡಿಕೆ
ರಾಹುಲ್ ಗಾಂಧಿ ಅವರ ಕೈ ಬಲಪಡಿಸಲು ಸಿದ್ದರಾಮಯ್ಯ ಅವರಂತಹ ನಾಯಕರು ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಎಂದು ದೇವೇಗೌಡ ಅಚ್ಚರಿ ಹೇಳಿಕೆ ನೀಡಿದರು.
ಇದೇ ವೇಳೆ ದೇವೇಗೌಡರು ಮೈಸೂರು ಮೇಯರ್ ಚುನಾವಣೆಯಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ ದೊಡ್ಡಗೌಡ್ರು, ಸಿದ್ದರಾಮಯ್ಯ ಅವರದೇ ಎಲ್ಲಾ ಪ್ರಮಾದವಾಗಿದೆ ಎಂದರು.
ಕುಮಾರಸ್ವಾಮಿಗೆ ಬುದ್ಧಿ ಇಲ್ಲಾಂತ ನಂಗೂ ಇಲ್ವಾ?: ಸಿದ್ದರಾಮಯ್ಯ
2018ರಲ್ಲಿ ಮೈಸೂರು ಮೇಯರ್ ಪಟ್ಟ ಗಿಟ್ಟಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನ ಪಟ್ಟಿದ್ದರು. ಜೆಡಿಎಸ್ 25 ಸದಸ್ಯರನ್ನು ಗೆದ್ದಿದ್ದರೂ ಸಿದ್ದರಾಮಯ್ಯ ಅವರ ಭಾವನೆಯನ್ನು ಅರ್ಥ ಮಾಡಿಕೊಂಡು ನಾನೇ ಮೈಸೂರಿನಲ್ಲಿ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಿ ಎಂದು ಹೇಳಿದ್ದೆ. ಅದಾದ ಮೇಲೆ ನಮಗೆ ಬಿಟ್ಟುಕೊಟ್ಟಿದ್ದರು ಎಂದು ತಿಳಿಸಿದರು.
ಈ ಬಾರಿ ಕೂಡ ಸಿದ್ದರಾಮಯ್ಯ ಅವರು ಹಠ ಮಾಡಿದರೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟು ಕೊಡಿ ಎಂದು ನಮ್ಮ ಪಕ್ಷದ ಸ್ಥಳೀಯ ನಾಯಕರಿಗೆ ಸೂಚಿಸಿದ್ದೆ. ಕಡೆಯ 2 ವರ್ಷ ನಾವು ಇಟ್ಟುಕೊಳೋಣ, ಚುನಾವಣೆಗೆ ಅಣಿಯಾಗೋಣ ಎಂದು ಕೂಡ ಹೇಳಿದ್ದೆ. ಆದರೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷವನ್ನು ಲೆಕ್ಕಕ್ಕೇ ಇಟ್ಟುಕೊಳ್ಳಲಿಲ್ಲ ಎಂದು ಸ್ಪಷ್ಟಪಡಿಸಿದರು.