Tuesday, September 28, 2021
Homeಕರಾವಳಿಸನ್ಮಾನ್ಯ ಮುಖ್ಯಮಂತ್ರಿ ಶ್ರೀಬಸವರಾಜ.ಎಸ್.ಬೊಮ್ಮಾಯಿ ರವರ ಎರಡು ದಿನಗಳ ಕರಾವಳಿ ಜಿಲ್ಲೆಗಳ ಪ್ರವಾಸ… ...

ಸನ್ಮಾನ್ಯ ಮುಖ್ಯಮಂತ್ರಿ ಶ್ರೀಬಸವರಾಜ.ಎಸ್.ಬೊಮ್ಮಾಯಿ ರವರ ಎರಡು ದಿನಗಳ ಕರಾವಳಿ ಜಿಲ್ಲೆಗಳ ಪ್ರವಾಸ… ಆಗಸ್ಟ್ 12 ರ ಪೂರ್ಣ ದಿನದ ಸಾರಾಂಶ….

- Advertisement -
Renault
- Advertisement -
Home Plus
- Advertisement -

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಹಾಗೂ ಗಡಿ ಭಾಗಗಳಲ್ಲಿ ತಪಾಸಣೆ ವ್ಯವಸ್ಥೆ ಪರಿಶೀಲಿಸಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಬಸವರಾಜ.ಎಸ್.ಬೊಮ್ಮಾಯಿ ರವರು ಎರಡು ದಿನಗಳ ಕರಾವಳಿ ಜಿಲ್ಲೆಗಳ ಪ್ರವಾಸ ನಿಮಿತ್ತ ಇಂದು ಮಂಗಳೂರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್, ವೈದ್ಯಕೀಯ ಶಿಕ್ಷಣ ಸಚಿವರಾದ ಸುಧಾಕರ್, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ.ವೈ, ಹರೀಶ್ ಪೂಂಜಾ, ಸಂಜೀವ ಮಠಂದೂರು,  ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಪೊಲೀಸ್ ಆಯುಕ್ತ ಶಶಿಕುಮಾರ್, ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಅಪರ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ಡಿಎಚ್‌ಒ ಡಾ. ಕಿಶೋರ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕರು,  ಆರೋಗ್ಯ ಮತ್ತು ಕುಟಿಂಬ ಕಲ್ಯಾಣ ಇಲಾಖೆಯ ಆಯುಕ್ತರು ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ  ಆಗಮಿಸಿದ ಸಿಎಂ ಬೊಮ್ಮಾಯಿ  ಮಾತನಾಡಿ, ತನಗೆ ಗಾರ್ಡ್ ಆಫ್ ಹಾನರ್ ಬೇಡ ಎಂದರು. ಇನ್ನು ಮುಂದೆ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ತನಗೆ ಗೌರವ ವಂದನೆ ನೀಡುವುದು ಬೇಡ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. “ಇಂದು ಪೊಲೀಸರು ಪೂರ್ವ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಿದ್ದ ಗೌರವ ವಂದನೆ ಸ್ವೀಕರಿಸಿದ್ದೇನೆ. ಆದರೆ ಇನ್ನು ಮುಂದೆ ಸರ್ಕಾರಿ ಕಚೇರಿಗಳನ್ನು ಬಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಗೌರವ ವಂದನೆ ನೀಡುವ ಅಗತ್ಯವಿಲ್ಲ. ಏರ್ ಪೋರ್ಟ್, ರೈಲ್ವೇ ಸ್ಟೇಷನ್, ಬಸ್ ನಿಲ್ದಾಣಗಳಲ್ಲಿ ಗೌರವ ವಂದನೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಅಲ್ಲದೇ ಅನಗತ್ಯ ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ಪ್ರತಿ ಬಾರಿ ಜಿಲ್ಲೆಗೆ ಆಗಮಿಸಿದಾಗ ಗೌರವ ವಂದನೆ ಬೇಡ. ಅಲ್ಲದೇ ಜನರಿಗೆ ತೊಂದರೆ ಆಗುವ ಕಡೆಗಳಲ್ಲಿ ಗಾರ್ಡ್ ಆಫ್ ಹಾನರ್ ಬೇಡ. ಈ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗುವುದು’ ಎಂದು ಸಿಎಂ ತಿಳಿಸಿದರು. . ದಕ್ಷಿಣ ಕನ್ನಡ: ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಕಾರ್ಯಕ್ರಮಗಳಲ್ಲಿ ಹೂಗುಚ್ಛ, ಹಣ್ಣಿನ ಬುಟ್ಟಿ ನೀಡದಂತೆ ಸುತ್ತೋಲೆ ಹೊರಡಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಇದೀಗ ಗಾರ್ಡ್ ಆಫ್ ಹಾನರ್ ನಿರಾಕರಿಸಿದ್ದಾರೆ.

ನಂತರ ಕೋವಿಡ್ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಗಡಿ ಜಿಲ್ಲೆಯಲ್ಲಿ ಜಾಗೃತೆ ವಹಿಸಬೇಕು. ಪಕ್ಕದ ರಾಜ್ಯದವರಿಗೆ ಟೆಸ್ಟ್ ಮಾಡಬೇಕು. ಈಗಾಗಲೇ ಎಲ್ಲಾ ಗಡಿ ಜಿಲ್ಲೆಗಳಿಗೆ ನಾನು ಭೇಟಿ ಕೊಡುತ್ತಿದ್ದೇನೆ. ಮೈಸೂರು ಮುಗಿಸಿ ನಂತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಪ್ರವಾಸ ಕೈಗೊಂಡಿದ್ದೇನೆ. ಕೇರಳ ಮತ್ತು ಮಹಾರಾಷ್ಟ್ರದ ಎಲ್ಲಾ ಗಡಿ ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ ಎಂದು ತಿಳಿಸಿದರು. ರಾಜ್ಯದ ಎಲ್ಲಾ ಕಡೆಗಳಲ್ಲೂ ವೆಂಟಿಲೇಟರ್, ಆಕ್ಸಿಜನ್ ಬೆಡ್​ಗಳನ್ನು ಹೆಚ್ಚಿಸಲಾಗುತ್ತಿದೆ. ಎಂಥಾ ಪರಿಸ್ಥಿತಿ ಬಂದರೂ ಸನ್ನದ್ದರಾಗಿರಲು ನಾವು ಸಿದ್ಧರಾಗಬೇಕು. ಮಕ್ಕಳಿಗೆ ಸೋಂಕು ತಗುಲುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ. ಮಕ್ಕಳ ಇಮ್ಯುನಿಟಿ ಪವರ್ ಹೆಚ್ಚಿಸುವ ಸಲುವಾಗಿ ಪೌಷ್ಟಿಕ ಆಹಾರ ನೀಡಲು ಸೂಚಿಸಲಾಗಿದೆ. ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮಕ್ಕಳ ಕೋವಿಡ್ ಟೆಸ್ಟ್​ಗೆ ಒಳಪಡಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳ ಐಸಿಯು ಮತ್ತು ಬೆಡ್​ಗಳು ತಯಾರಾಗಿವೆ ಎಂದು ಹೇಳಿದರು. ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ರಾಜ್ಯಾದ್ಯಂತ ‘ವಾತ್ಸಲ್ಯ ಕೇಂದ್ರ’ ತೆರೆಯಲಾಗುವುದು. ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೆ ಐಸಿಯುನಲ್ಲಿಯೂ ವ್ಯವಸ್ಥೆ ಮಾಡಲಾಗುವುದು ಎಂದು ಅಭಿಪ್ರಾಯಪಟ್ಟರು. ಆಗಸ್ಟ್ 23 ರಿಂದ 9-12ನೇ ತರಗತಿಗಳ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಬ್ಯಾಚ್​ ವೈಸ್​ ತರಗತಿ ಆರಂಭ ಮಾಡಲು ನಿರ್ಧರಿಸಿದ್ದೇವೆ. ಇದನ್ನು ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಕೂಡಾ ತಿಳಿಸಿದ್ದಾರೆ.

ವೆನ್ಲಾಕ್  ಜಿಲ್ಲಾ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನೂತನ  ಸೌಲಭ್ಯವುಳ್ಳ ಐಸಿಯು ಘಟಕವನ್ನು ಉದ್ಘಾಟನೆ :

ನಂತರ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್ ಬೊಮ್ಮಾಯಿ ರವರು ಮಂಗಳೂರಿನ‌ ಹೃದಯ ಭಾಗದಲ್ಲಿರುವ  ವೆನ್ಲಾಕ್  ಜಿಲ್ಲಾ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನೂತನ 32 ಬೆಡ್ ಸೌಲಭ್ಯವುಳ್ಳ ಐಸಿಯು ಘಟಕವನ್ನು ಉದ್ಘಾಟಿಸಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಎಸ್ ಡಿಆರ್ ಎಫ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ಐಸಿಯು ಘಟಕ ವೆಂಟಿಲೇಟರ್, ಮೊನಿಟರ್ ಸೇರಿ ಅಗತ್ಯ ವೈದ್ಯಕೀಯ ಉಪಕರಣಗಳಿರುವ ಘಟಕವಾಗಿದೆ.ಮಕ್ಕಳ ಮತ್ತು ವಯಸ್ಕರ ಚಿಕಿತ್ಸೆಗೆ ಬಳಸಲು ತಯಾರಾಗಿರುವ ಘಟಕ ಇದಾಗಿದೆ.

ಡಾ.ಬಿ.ಆರ್. ಅಂಬೇಡ್ಕರ್ ಭವನದ ನೂತನ ಕಟ್ಟಡದ ಲೋಕಾರ್ಪಣೆ :

ಆಮೇಲೆ ಡಾ.ಬಿ.ಆರ್. ಅಂಬೇಡ್ಕರ್ ಭವನದ ನೂತನ ಕಟ್ಟಡವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರ ಮಂಗಳೂರಿನಲ್ಲಿ ಲೋಕಾರ್ಪಣೆ ಮಾಡಿದರು.  

’ಕ್ವಿಮಿಪ್ ಜಲಸಿರಿ’ ಯೋಜನೆಗೆ ಸಿಎಂ ಚಾಲನೆ :

ನಂತರ ಮಂಗಳೂರು ನಗರ ನೀರು ಸರಬರಾಜು ಯೋಜನೆಗೆ ಎಡಿಬಿ ನೆರವಿನ 792.42 ಕೋಟಿ ರೂಪಾಯಿ ವೆಚ್ಚದ ‘ಕ್ವಿಮಿಪ್ ಜಲಸಿರಿ’ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.  ಮಂಗಳೂರು ಮಾಹಾನಗರದ ಆರು ಲಕ್ಷ ಜನಸಂಖ್ಯೆ ಬಳಕೆಗೆ ಅಗತ್ಯವಾಗುವಂತೆ ಯೋಜನೆ ಸಿದ್ಧವಾಗುತ್ತಿದೆ. 8 ವರ್ಷಗಳ ಅವಧಿಗೆ ನಿರ್ವಹಣೆ ಹಾಗೂ ಕಾರ್ಯಾಚರಣೆ ವೆಚ್ಚ ₹ 204.75 ಕೋಟಿ ಆಗಿದ್ದು,  ಮೆ. ಸುಯೇಜ್ ಪ್ರಾಜೆಕ್ಟ್ ಪ್ರೈ.ಲಿ ಹಾಗೂ ಡಿಆರ್‌ಎಸ್ ಇನ್ಫಾಟೆಕ್ ಪ್ರೈ.ಲಿ. ಕಂಪನಿಗಳು ₹ 587.67 ಕೋಟಿ ವೆಚ್ಚದಲ್ಲಿ ನಿರ್ಮಾಣದ ಹೊಣೆ ನಿರ್ವಹಿಸುತ್ತಿವೆ. ಈ ಯೋಜನೆಯಲ್ಲಿ ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ 81.7 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಉನ್ನತೀಕರಣ, 23 ಮೇಲ್ಮಟ್ಟದ ಜಲಸಂಗ್ರಾಹಕ, 8 ಪಂಪಿಂಗ್ ಘಟಕಗಳು,  5 ನೆಲ ಹಂತದ ಸಂಗ್ರಹಗಾರ, 55 ಕಿ.ಮೀ. ಪಂಪಿಂಗ್ ಮುಖ್ಯ ಕೊಳವೆ ಅಳವಡಿಕೆ ಕಾಮಗಾರಿ, 1,500 ಕಿಮೀ ವಿತರಣಾ ಕೊಳವೆ, 86,300 ಗ್ರಾಹಕರ ಮಾಪಕ ಅಳವಡಿಸಲಾಗುತ್ತಿದೆ. ನಗರ ವ್ಯಾಪ್ತಿಯನ್ನು 54 ವಲಯಗಳಾಗಿ ವಿಂಗಡಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಹಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ :

ತದನಂತರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ  ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸಿ.ಎಂ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಮನೆಯಲ್ಲಿರುವ ಕೋವಿಡ್ ಸೋಂಕಿತರನ್ನು ಆದಷ್ಟು ಸಂಖ್ಯೆಯಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸದ್ದಕ್ಕೆ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿ, 80% ಸೋಂಕಿತರು ಮನೆಗಳಲ್ಲೇ ಇರುವ ಬಗ್ಗೆ ಡಿ.ಸಿ ರಾಜೇಂದ್ರರನ್ನು ಪ್ರಶ್ನಿಸಿದರು. ಈ ಚರ್ಚೆಯ ವೇಳೆ ಮಧ್ಯಪ್ರವೇಶಿಸಿದ ಸಿ.ಎಂ ಬಸವರಾಜ ಬೊಮ್ಮಾಯಿ,  ಕೋವಿಡ್ ಕೇರ್ ಸೆಂಟರ್ ಗೆ ಬನ್ನಿ ಅಂದ್ರೆ ಜನ ಬರುವುದಿಲ್ಲ. ಮೊದಲು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವ್ಯವಸ್ಥೆ ಹೆಚ್ಚಿಸಿ. ಆಕ್ಸಿಜನ್, ವೆಂಟಿಲೇಟರ್ ಸೇರಿ ಎಲ್ಲಾ ಸೌಕರ್ಯ ಮಾಡಿ ಕೊಡಿ. ಆ ಬಳಿಕ ಸೋಂಕಿತ ವ್ಯಕ್ತಿಯ ಮನೆಯ ಸುತ್ತ ಟೆಸ್ಟಿಂಗ್ ಹೆಚ್ಚಿಸಿ,  ಬಳಿಕ ವೈದ್ಯರ ತಂಡ ನೇಮಿಸಿ ಸೋಂಕಿತನ ರೋಗಲಕ್ಷಣ ಗಮನಿಸಿ ಮನವೊಲಿಸಿ. ಆದಷ್ಟು ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಎಂದು ಸೂಚಿಸಿದರು. ಸಭೆಯಲ್ಲಿ ಎಲ್ಲದಕ್ಕೂ ಪರಿಹಾರ ಕೊಡೋಣ ಎಂದು ತಿಳಿಸಿದ ಬೊಮ್ಮಾಯಿ, ನನ್ನ ಪ್ರಗತಿ ಪರಿಶೀಲನೆ ಸ್ಟೈಲ್ ಸ್ವಲ್ಪ ಬೇರೆ ರೀತಿಯದ್ದಾಗಿದೆ. ನಾನು ಇಲ್ಲೇ ಅದಕ್ಕೆಲ್ಲಾ ಪರಿಹಾರ ಕಂಡುಕೊಂಡೇ ಹೋಗುತ್ತೀನಿ ಎಂದು ಹೇಳಿದರು. ವೈಜ್ಞಾನಿಕ ಕಾರಣ ನೋಡಿ ಹೋಂ ಐಸೋಲೇಷನ್ ಮಾಡಿ. ವೈದ್ಯರ ಮೂಲಕ ಸೋಂಕಿತರ ಮನವೊಲಿಕೆ ಕೆಲಸ ಮಾಡಿ. ಗ್ರಾಮ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರೌಂಡ್ ಲೆವೆಲ್ ಪರಿಶೀಲನೆ ನಡೆಸಿ, ಹೋಂ ಐಸೋಲೇಶನ್ ಇದ್ದವರಿಗೆ ದಿನದಲ್ಲಿ ಎರಡು ಬಾರಿ ತಪಾಸಣೆ ನಡೆಸಿ. ಅವರ ಮನೆ, ಕೊಠಡಿ ಹಾಗೂ ಸುತ್ತಲಿನ ವ್ಯವಸ್ಥೆಯತ್ತ ಗಮನ ಹರಿಸಿ. ಇದರ ಜೊತೆಗೆ ಕೋವಿಡ್ ಕೇರ್ ಸೆಂಟರ್ ಕೂಡ ಸುವ್ಯವಸ್ಥಿತವಾಗಿರಲಿ. ಗ್ರಾಮ ಮಟ್ಟದಲ್ಲಿ ಸೋಂಕಿತರಿಗೆ ಪಿ.ಡಿ.ಒ ಗಳು ಮನವರಿಕೆ ಮಾಡಿಸಿ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಬೇಕು. ಉತ್ತಮವಾಗಿ ಕೆಲಸ ಮಾಡಿದ್ರೆ ಲಾಕ್‌ಡೌನ್ ಅಗತ್ಯವಿಲ್ಲ ಅಂತ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಹಾಗೂ ಸೆಂಟರ್ ಗಳಲ್ಲಿ ಎಲ್ಲಾ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿ,  ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸಿಬ್ಬಂದಿ ಕೊರತೆಯ ಬಗ್ಗೆ ಹೇಳಿದರು. ಇದೇ ವೇಳೆ ಶಾಸಕ ಯು.ಟಿ.ಖಾದರ್ ಮಾತನಾಡಿ, ಕೋವಿಡ್ ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್ ಗೆ ಸೇರಿಸುತ್ತೇವೆ ಎಂದರೆ ಜನ ಟೆಸ್ಟ್ ಮಾಡೋದಕ್ಕೂ ಹಿಂಜರಿಯಬಹುದು. ಹೀಗಾಗಿ ಆದೇಶ ಮಾಡುವ ಮುನ್ನ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚಿಸುವುದು ಒಳಿತು ಎಂದರು. ಇದಕ್ಕುತ್ತರಿಸಿದ ಸಿ.ಎಂ, ಮುಂದೆ ಲಾಕ್ ಡೌನ್ ಪರಿಸ್ಥಿತಿ ಬರಬಾರದು ಎಂಬ ಮುಂದಾಲೋಚನೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ. ಹೀಗಾಗಿ ಸೋಂಕು ತಗುಲಿದಾಗಲೇ ಕಟ್ಟುನಿಟ್ಟು ಮಾಡೋದು ಸೂಕ್ತ ಎಂದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿ , ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್, ಮಾಸ್ಕ್ ಗ್ಲೌಸ್ ಕೊರತೆ ಇದೆ ಎಂದು ಶಾಸಕ ಯು .ಟಿ ಖಾದರ್ ಆರೋಪಿಸಿದರು. ಈ ವೇಳೆ ಉತ್ತರಿಸಿದ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಪಿಪಿಇ ಕಿಟ್ ಸಾಕಷ್ಟು ಲಭ್ಯವಿದೆ. ಆದರೆ ಗ್ಲೌಸ್ ಮತ್ತು ಮಾಸ್ಕ್ ಕೊರತೆ ಇದ್ದು ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದರು. ಇದರಿಂದ ಅಸಮಾಧಾನಗೊಂಡ ಮುಖ್ಯಮಂತ್ರಿಗಳು, ಈ ಸಂಬಂಧ ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹಾಗೂ ಆರೋಗ್ಯಾಧಿಕಾರಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. “ಮಾಸ್ಕ್ , ಗ್ಲೌಸ್ ಇಲ್ಲದೇ ಏನ್ ಆಡಳಿತ ಮಾಡ್ತೀರಾ ಇಲ್ಲಿ ? ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ಕೋಡೋದಕ್ಕೆ ನಿಮ್ಮಿಂದ ಆಗೋದಿಲ್ವಾ? ಅಷ್ಟು ಕಾಮನ್ ಸೆನ್ಸ್ ಇಲ್ಲದೇ ಏನ್ರೀ ಮಾಡ್ತೀರಾ ನೀವು ಇಲ್ಲಿ” ಎಂದು ಅಧಿಕಾರಿಗಳ ಮೇಲೆ ಗರಂ ಆದರು. ಎಸ್ ಡಿ ಆರ್ ಎಫ್ ಫಂಡ್ ನಿಂದ ಇವತ್ತೇ ಖರೀದಿ ಮಾಡಿ. ಸಂಜೆಯೊಳಗೆ ನನಗೆ ರಿಪೋರ್ಟ್ ಕೊಡಿ ಎಂದು ಖಡಕ್ ಸೂಚನೆಯಿತ್ತರು.

ಉಡುಪಿ ಜಿಲ್ಲೆಗೆ ಬೇಟಿ :

ಸಿಎಂ ಆದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಜಿಲ್ಲೆಯ ಗಡಿಭಾಗದ ಹೆಜಮಾಡಿಯಲ್ಲಿ ಸ್ವಾಗತಿಸಲಾಯಿತು. ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪುಷ್ಪಗುಚ್ಛ, ಹೂವಿನ ಹಾರದ ಬದಲಿಗೆ ಪುಸ್ತಕ ನೀಡಿ ಸಿ.ಎಂರವರನ್ನು ಸ್ವಾಗತಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಸರ್ಕಾರಿ ಕಾರ್ಯಕ್ರಮದಲ್ಲಿ ಹೂಗುಚ್ಛ ಹಾರ ತುರಾಯಿ ಬದಲು ಪುಸ್ತಕ ನೀಡಲು ಆದೇಶ ಹೊರಡಿಸಿರುವುದು ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕು ಎನ್ನುವ ಉದ್ದೇಶದಿಂದ ಅಲ್ಲ. ಖಾಸಗಿಯಾಗಿ ಅವರು ಹೂವಿನ ವ್ಯಾಪಾರವನ್ನು ಮಾಡಬಹುದು. ಸರ್ಕಾರಿ ಕಾರ್ಯಕ್ರಮದಲ್ಲಿ ಮಾತ್ರ ಹೂಗುಚ್ಚ ಹಾರ ತುರಾಯಿ ಬೇಡ ಎಂದಿದ್ದೇನ  ಎಂದು ಸ್ಪಷ್ಟನೆ ನೀಡಿದರು. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಗೌರವ ವಂದನೆಯನ್ನು ಸಲ್ಲಿಸುವುದನ್ನು ನಿಲ್ಲಿಸಲು ತೀರ್ಮಾನಿಸಿದ್ದೇನೆ. ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ತನಗೆ ಗಾರ್ಡ್ ಆಫ್ ಹಾನರ್ ಬೇಡ. ಬೆಂಗಳೂರಿಗೆ ತೆರಳಿದ ತಕ್ಷಣವೇ ಈ ಬಗ್ಗೆ ಆದೇಶ ಹೊರಡಿಸುತ್ತೇನೆ’ ಎಂದು ಸಿಎಂ ಮಂಗಳೂರಿನಲ್ಲಿ ನೀಡಿದ್ದ ಹೇಳಿಕೆಯನ್ನು ಪುನರುಚ್ಚರಿಸಿ  ಹೇಳಿದರು.

ವೈಯಕ್ತಿಕವಾಗಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಶುಭಕೋರುವ ಕಟೌಟ್ ಹೋರ್ಡಿಂಗ್ ಹಾಕಬಾರದು. ನಾನು ಸಿಎಂ ಆಗಿದ್ದರೂ ಈ ನಾಡಿನ ಸೇವಕನಾಗಿದ್ದೇನೆ. ಈ ಭಾವನೆ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ. ಹೀಗಾಗಿ ಯಾರೂ ಕಟೌಟ್ ಹೋರ್ಡಿಂಗ್ ಹಾಕಬೇಡಿ’ ಎಂದು ಸಿಎಂ ಮನವಿ ಮಾಡಿದರು.

ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ, ‘ನಾನು ಯಾವುದೇ ಮ್ಯಾಜಿಕ್ ಮಾಡುತ್ತಿಲ್ಲ. ಪ್ರೀತಿ ಮತ್ತು ವಿಶ್ವಾಸವೇ ನಾನು ಮಾಡುತ್ತಿರುವ ಮ್ಯಾಜಿಕ್’ ಎಂದ ಹೇಳಿದರು.

ರಾಜ್ಯದಲ್ಲಿ ಕೊರೋನಾದಿಂದ 1 ಲಕ್ಷ ಸಾವು ಸಂಭವಿಸಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಪ್ರತಿಯೊಂದು ಜಿಲ್ಲೆಯಲ್ಲಿ ವರದಿಯಾದ ಎಲ್ಲಾ ಸಾವುಗಳು ಸರಕಾರದ ದಾಖಲೆಯಲ್ಲಿವೆ. ಸಿದ್ದರಾಮಯ್ಯರ ಹೇಳಿಕೆಗೆ ಆಧಾರ ಕೊಟ್ಟರೆ ಪರಿಶೀಲಿಸುವುದಾಗಿ ಹೇಳಿದರು. ಇದೇ ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭಾ ಅಧಿವೇಶನ ಕರೆಯುವುದಾಗಿ ಸಿ.ಎಂ ಹೇಳಿದರು.

ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ :

ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಜನರ ಹಲವು ದಶಕಗಳ ಬೇಡಿಕೆಯಂತೆ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಅದೇ ರೀತಿ ಸರ್ಕಾರ ಇತ್ತೀಚಿಗೆ ರೂಪಿಸಿದ ಪಿ.ಪಿ.ಪಿ ಮಾದರಿ ಮೆಡಿಕಲ್ ಕಾಲೇಜುಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯು ಇರಲಿದೆ. ಇದಕ್ಕೆ ತಾನೇ ಸ್ವತಃ ಬಂದು ಅಡಿಗಲ್ಲು ಹಾಕುವುದಾಗಿ ಸಿಎಂ ಭರವಸೆ ನೀಡಿದರು. 200 ಬೆಡ್ ಗಳ ವ್ಯವಸ್ಥೆಯುಳ್ಳ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯನ್ನು ಸರ್ಕಾರವೇ ವಹಿಸಿಕೊಳ್ಳಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದರಿಂದ ಈ ಭಾಗದ ಜನರಿಗೆ ನಿರಂತರ ಆರೋಗ್ಯ ಸೇವೆ ಲಭಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ :

ತದನಂತರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಉಡುಪಿಯ ಜಿಲ್ಲಾ ಪಂಚಾಯತ್‍ನ ಡಾ,ವಿ,ಎಸ್.ಆಚಾರ್ಯ ಸಭಾಂಗಣದಲ್ಲಿ  ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಶ್ರೀಕೃಷ್ಣ ಮಠಕ್ಕೆ ಭೇಟಿ :

ನಂತರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ದೇವರ ದರ್ಶನ ಪಡೆದರು. ಈ ವೇಳೆ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ರಾಜಾಂಗಣದ ಶ್ರೀನರಹರಿ ತೀರ್ಥವೇದಿಕೆಯಲ್ಲಿ ಸಿ.ಎಂರವರನ್ನು ಗೌರವಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿಯವರು, ಚಿಕ್ಕವನಿದ್ದಾಗ ಕೃಷ್ಣನ ದರ್ಶನಕ್ಕಾಗಿ ಉಡುಪಿಗೆ ಆಗಮಿಸುತ್ತಿದ್ದೆನು. ಆದರೆ, ಕಳೆದ ಬಾರಿ ತನಗೆ ಉಡುಪಿ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಿದ್ದರು. ಜಿಲ್ಲೆಯ ಜನ ಶಾಸಕರು ನನ್ನ ಮೇಲೆ ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ಹೀಗಾಗಿ ಉಡುಪಿಯಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಗುತ್ತದೆ. ಉಡುಪಿಯ ಜನ ಹೃದಯ ವೈಶಾಲ್ಯತೆ ಇರುವ ಜನರಾಗಿದ್ದಾರೆ ಎಂದು ಶ್ಲಾಘಿಸಿದರು.

ಕೊನೆಯಲ್ಲಿ ಉಡುಪಿಯಲ್ಲೇ ವಾಸ್ತವ್ಯ ಹೂಡಿದರು.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments