ವಿಧಾನಸಭೆ: ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯೆ ಸೌಮ್ಯ ರೆಡ್ಡಿ, ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಇನ್ನೂ ನಡೆಯುತ್ತಿದೆ. ಆದರೆ, ಪೊಲೀಸ್ ಇಲಾಖೆ ಎರಡು ತಿಂಗಳು ಕಾರ್ಯಾಚರಣೆ ಮಾಡಿ ಮತ್ತೆ ಸುಮ್ಮನಾಗಿದೆ. ಇದು ಹಣ್ಣಿನ ಸೀಜನ್ ಥರ ಆಗಬಾರದು. ಡ್ರಗ್ಸ್ ವಿರುದ್ಧ ನಿರಂತರವಾಗಿ ಕಾರ್ಯಾ ಚರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡ್ರಗ್ಸ್ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣಕ್ರಮ ಕೈಗೊಳ್ಳುತ್ತಿದೆ.
ನಮ್ಮ ಕಾನೂನಿನಲ್ಲಿ ಕೆಲವು ಲೋಪದೋಷಗಳಿವೆ. ಕಳೆದ ಐದು ವರ್ಷದಲ್ಲಿ ಪತ್ತೆ ಹಚ್ಚಲಾಗದಷ್ಟು ಪ್ರಕರಣಗಳನ್ನು ಕೇವಲ 5 ತಿಂಗಳಲ್ಲಿ ಪತ್ತೆಹಚ್ಚಿ 2020ರಲ್ಲಿ 2786 ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಮಹಾನಗರಗಳಲ್ಲಿ ಹುಕ್ಕಾ ಬಾರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಹುಕ್ಕಾ ಬಾರ್‌ಗಳಿಗೆ ಅನುಮತಿ ನೀಡುತ್ತಿವೆ. ಅವುಗಳನ್ನು ನಿಷೇಧ ಮಾಡಲು ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಬೇಕು. ಬೇರೆ ರಾಜ್ಯಗಳಲ್ಲಿ ಹುಕ್ಕಾ ಬಾರ್ ನಿಯಂತ್ರಿಸಲು ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡು ರಾಜ್ಯದಲ್ಲಿಯೂ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.