ಬೆಂಗಳೂರು, ಫೆಬ್ರವರಿ 06 : ಸರ್ಕಾರ ಕೊಡುವ ಒಂದು ಸಾವಿರ ಪಿಂಚಣಿಗಾಗಿ ಬದುಕಿದ್ದ ಗಂಡ ಸತ್ತೋಗಿರುವುದಾಗಿ ಮರಣ ಪ್ರಮಾಣ ಪತ್ರ ಮಾಡಿಸಿ ಮಹಿಳೆಯೊಬ್ಬಳು ಸುದ್ದಿಯಾಗಿದ್ದಾರೆ.
ಮಾಗಡಿ ರಸ್ತೆಯಲ್ಲಿ ನೆಲೆಸಿರುವ ಸುಜಾತಾ ತನ್ನ ಪತಿ ಭಾಸ್ಕರ್ ಜತೆ ವಾಸವಾಗಿದ್ದರು. ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಹೆಂಡತಿ ಕಿರುಕುಳ ತಾಳಲಾರದೇ ಭಾಸ್ಕರ್ ಎರಡು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ. ಈ ವೇಳೆ ಸುಜಾತಾ ತನ್ನ ಗಂಡ ಸತ್ತು ಹೋಗಿದ್ದಾನೆ ಎಂದು ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸ್ವೀಕರಿಸಿ ಬಿಬಿಎಂಪಿ ಅಧಿಕಾರಿಗಳು ಭಾಸ್ಕರ್ ಸತ್ತು ಹೋಗಿರುವುದಾಗಿ ಮರಣ ಪ್ರಮಾಣ ಪತ್ರ ಮಾಡಿಕೊಟ್ಟಿದ್ದಾರೆ.
ಈ ಮರಣ ಪ್ರಮಾಣ ಪತ್ರವನ್ನು ಸಲ್ಲಿಸಿ ವಿಧವೆ ವೇತನಕ್ಕೆ ಅರ್ಜಿ ಸಲ್ಲಿಸಿದ್ದರು. ಗಂಡ ಇಲ್ಲ ಎಂದು ಸುಜಾತಾ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿ ಮಾಸಿಕ ಪಿಂಚಣಿ ಮಂಜೂರು ಆಗಿತ್ತು.
ಇತ್ತೀಚೆಗೆ ಗಂಡ ವಾಪಸು ಪತ್ನಿ ಸುಜಾತಾ ಮನೆಗೆ ಬಂದಿದ್ದಾನೆ. ಈ ವೇಳೆ ಡೆತ್ ಸರ್ಟಿಫಿಕೇಟ್ ಸಿಕ್ಕಿದೆ. ಹೆಂಡತಿ ನಡೆ ಬಗ್ಗೆ ಅನುಮಾನಗೊಂಡು ಭಾಸ್ಕರ್ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಪಿಂಚಣಿ ಪಡೆಯಲು ಡೆತ್ ಸರ್ಟಿಫಿಕೇಟ್ ಮಾಡಿಸಿದ್ದಾಗಿ, ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಲಂಚ ನೀಡಿದ್ದಾಗಿ ಸುಜಾತ ತಿಳಿಸಿದ್ದಾರೆ. ಇದೀಗ ಪೊಲೀಸರು ಬದುಕಿದ್ದ ವ್ಯಕ್ತಿಗೆ ಡೆತ್ ಸರ್ಟಿಫಿಕೇಟ್ ನೀಡಿದ ಅಧಿಕಾರಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.