ಮಂಗಳೂರು, ಫೆಬ್ರವರಿ 10: ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ, ದಕ್ಷಿಣ ಕನ್ನಡ-ಕೇರಳ ಗಡಿಯಲ್ಲಿ ಅಗತ್ಯ ಎಚ್ಚರಿಕೆಯನ್ನು ಕೈಗೊಳ್ಳಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ನೆಗೆಟೀವ್ ವರದಿ ತರುವಂತೆ ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಈ ಕುರಿತು ಮಾಹಿತಿ ನೀಡಿದ್ದಾರೆ. “ಜಿಲ್ಲೆಗೆ ವಿದ್ಯಾರ್ಥಿಗಳು, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಸೂಕ್ತ ತಪಾಸಣೆಗೊಳಪಡಿಸಿ ಕೋವಿಡ್ ಹರಡದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳು ಮಂಗಳೂರು ನಗರ ಪೊಲೀಸ್ ಆಯುಕ್ತರು, ಕಂದಾಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ತುರ್ತು ಸಭೆಯನ್ನು ನಡೆಸಿದರು. ಕೇರಳ-ಕರ್ನಾಟಕದ ನಡುವಿನ ಜನರ ಸಂಚಾರಕ್ಕೆ ತೊಂದರೆ ಆಗದಂತೆ, ಕೋವಿಡ್ ಅನ್ ಲಾಕ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಮಂಗಳೂರು ನಗರದಲ್ಲಿ ಮಾಸ್ಕ್ ಹಾಕದಿದ್ದರೆ, ಸಾಮಾಜಿಕ ಅಂತರ ಕಾಪಾಡದಿದ್ದರೆ ದಂಡ ಹಾಕಲು ತಂಡಗಳನ್ನು ರಚನೆ ಮಾಡುವಂತೆ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆಗೆ ಸೂಚನೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಗಡಿಗಳಲ್ಲಿ ಆಂಟಿಜೆನ್ ಟೆಸ್ಟ್ ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಕಾಸರಗೋಡು, ಕೇರಳದಿಂದ ಬರುವ ನರ್ಸಿಂಗ್, ಇಂಜಿನಿಯರಿಂಗ್, ಪದವಿ ಕಾಲೇಜುಗಳ ವಿದ್ಯಾರ್ಥಿಗಳ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ.
ಉಭಯ ರಾಜ್ಯಗಳ ನಡುವಿನ ಸಂಚಾರವನ್ನು ಸ್ಥಗಿತಗೊಳಿಸದೇ, ಕೋವಿಡ್ ಮಾರ್ಗಸೂಚಿ ಅನ್ವಯ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇರಳದ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ, ಅವರಿಗೆ ಕೋವಿಡ್ ನೆಗೆಟೀವ್ ತರುವುದು ಕಡ್ಡಾಯ ಮಾಡಲು ಚರ್ಚೆ ನಡೆಸಲಾಯಿತು.
ಮಂಗಳವಾರ ದಕ್ಷಿಣ ಕನ್ನಡದಲ್ಲಿ 29 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 34074, ಸಕ್ರಿಯ ಪ್ರಕರಣಗಳ ಸಂಖ್ಯೆ 343.
ಅಂದಹಾಗೆ ಫೆಬ್ರವರಿ 9ರ ಮಂಗಳವಾರ ಕೇರಳದಲ್ಲಿ 5,214 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 9,77,395ಕ್ಕೆ ಏರಿಕೆಯಾಗಿದೆ.