ಟೆಹ್ರಾನ್/ಇಸ್ಲಾಮಾಬಾದ್: ಪಾಕಿಸ್ತಾನದ ಅಬೋಟಾಬಾದ್ ಉಗ್ರರ ನೆಲೆ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದ್ದು, ಇದೀಗ ತನ್ನ ಇಬ್ಬರು ಯೋಧರ ರಕ್ಷಣೆಗಾಗಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಇರಾನ್ ಸರ್ಜಿಕಲ್ ದಾಳಿ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಹಿಂದೂಸ್ತಾನ್ ವರದಿ ಪ್ರಕಾರ, ಬಲೂಚಿಸ್ತಾನದೊಳಗೆ ಜೈಶ್ ಉಲ್ ಅದ್ ಉಗ್ರರ ಮೇಲೆ ಇರಾನ್ ಸೇನೆ ದಿಢೀರ್ ದಾಳಿ ನಡೆಸಿ ಉಗ್ರರನ್ನು ಹತ್ಯೆಗೈದು ಇಬ್ಬರು ಇರಾನ್ ಯೋಧರನ್ನು ರಕ್ಷಿಸಿರುವುದಾಗಿ ತಿಳಿಸಿದೆ.
ಬುಧವಾರ(ಫೆ.03) ರಾತ್ರಿ ಇರಾನ್ ಸರ್ಜಿಕಲ್ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಉಗ್ರರಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ತಾನದ ಕೆಲವು ಸೈನಿಕರು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ.
ಸೈನಿಕರ ಬಿಡುಗಡೆ ಬಗ್ಗೆ ಇರಾನ್ ಅಧಿಕೃತವಾಗಿ ಘೋಷಣೆ ಮಾಡಿದೆ.
ಇರಾನ್ ನ ರೆವಲ್ಯೂಷನರಿ ಪಡೆ(ಐಆರ್ ಜಿಸಿ) ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಪಾಕಿಸ್ತಾನದೊಳಗೆ ನುಗ್ಗಿ ಈ ಕಾರ್ಯಾಚರಣೆ ನಡೆಸಿರುವುದಾಗಿ ವರದಿಯಾಗಿದೆ. ಈ ಮೂಲಕ ಉಗ್ರರ ವಶದಲ್ಲಿದ್ದ ಇಬ್ಬರು ಇರಾನ್ ಯೋಧರನ್ನು ರಕ್ಷಿಸಿರುವುದಾಗಿ ವಿವರಿಸಿದೆ.
ಪಾಕಿಸ್ತಾನದ ಸೇನೆಗೆ ಯಾವುದೇ ಸುಳಿವು ಸಿಗದಂತೆ ಇರಾನ್ ಸೇನೆ ನಿನ್ನೆ ರಾತ್ರಿ ಈ ಕಾರ್ಯಾಚರಣೆ ನಡೆಸಿದ್ದು, ಇದರೊಂದಿಗೆ ಪಾಕಿಸ್ತಾನದೊಳಗೆ ನುಗ್ಗಿ ದಾಳಿ ನಡೆಸಿದ ಮೂರನೇ ದೇಶ ಇರಾನ್ ಆಗಿದ್ದು, ಈ ಮೊದಲು ಅಮೆರಿಕ ನಂತರ ಭಾರತ ಸರ್ಜಿಕಲ್ ದಾಳಿ ನಡೆಸಿತ್ತು.