ಕೋಟಿ ಚೆನ್ನಯರ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರ…!!!
ಕೋಟಿ ಚೆನ್ನಯರ ಗರಡಿಯಲ್ಲಿ ಜಗದೀಶ್ ಅಧಿಕಾರಿ ಕ್ಷಮೆಯಾಚನೆ…!!!
ಮೂಡಬಿದ್ರೆಯ ಕೆಲ್ಲಪುತ್ತಿಗೆ ಕೋಟಿ ಚೆನ್ನಯರ ಗರಡಿಯಲ್ಲಿ ತಪ್ಪು ಕಾಣಿಕೆ…!!!
ಮೂಡಬಿದ್ರೆ: ಕೋಟಿ ಚೆನ್ನಯರ ಬಗ್ಗೆ ತನ್ನ ಹೇಳಿಕೆ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರು ಕ್ಷಮೆಯಾಚನೆ ಮಾಡಿದ್ದಾರೆ. ಇಂದು ಮೂಡುಬಿದಿರೆ ಸಮೀಪದ ಕೆಲ್ಲಪುತ್ತಿಗೆಯ ಪುರಾತನ ಶ್ರೀ ಕ್ಷೇತ್ರ ಭೂತರಾಜಗುಡ್ಡೆಯ ಶ್ರೀ ಧರ್ಮರಸು ದೈವ , ಕುಕ್ಕಿನಂತಾಯ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗರಡಿಗೆ ಭೇಟಿ ನೀಡಿ, ತಪ್ಪು ಕಾಣಿಕೆ ಸಲ್ಲಿಸಿ, ದೈವದೇವರ ಮುಂದೆ ಕ್ಷಮೆಯಾಚನೆ ಮಾಡಿದರು. ತನ್ನ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರು ಕೂಡ ಇದರಿಂದ ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಕ್ಷಮೆಯಾಚನೆ ಮಾಡುತ್ತಿದ್ದೇನೆ. ತನ್ನ ಮಾತಿನಿಂದ ಉಂಟಾದ ವಿವಾದಕ್ಕೆ ಕೋಟಿ ಚೆನ್ನಯರ ಗರಡಿಯಲ್ಲಿಯೇ ಬಂದು ನಿಂತು ಕ್ಷಮೆಯಾಚಿಸಿ, ತಪ್ಪು ಕಾಣಿಕೆ ಸಲ್ಲಿಸುವ ಮೂಲಕ ಎಲ್ಲಾ ವಿವಾದಗಳಿಗೆ ತಾನು ಇತಿಶ್ರೀ ನೀಡಲು ನಿರ್ಧರಿಸಿದ್ದೇನೆ. ಇನ್ನು ಸದ್ಯದಲ್ಲೇ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಅವರಲ್ಲೂ ಕ್ಷಮೆಯಾಚಿಸುತ್ತೇನೆ ಜೊತೆಗೆ ಕುದ್ರೋಳಿ ಹಾಗೂ ಗೆಜ್ಜೆಗಿರಿ ಕ್ಷೇತ್ರಕ್ಕೆ ತೆರಳಿ ತಪ್ಪು ಕಾಣಿಕೆ ಸಲ್ಲಿಸಿ, ಕ್ಷಮೆಯಾಚನೆ ಮಾಡುವುದಾಗಿಯೂ ಜಗದೀಶ್ ಅಧಿಕಾರಿ ಅವರು ಹೇಳಿದರು.