Sunday, September 24, 2023
HomeUncategorizedಕರಾವಳಿ ಕರ್ನಾಟಕದಲ್ಲೂ ಗಣಿಗಾರಿಕೆಗೆ ಜಿಲಾಟಿನ್ ಬಳಕೆ?

ಕರಾವಳಿ ಕರ್ನಾಟಕದಲ್ಲೂ ಗಣಿಗಾರಿಕೆಗೆ ಜಿಲಾಟಿನ್ ಬಳಕೆ?

- Advertisement -



Renault

Renault
Renault

- Advertisement -

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸುಮಾರು 120 ಕಲ್ಲಿನ ಕ್ವಾರಿಗಳು ಇದ್ದು, ಸ್ಫೋಟಕ್ಕೆ ಜಿಲೆಟಿನ್ ಸೇರಿದಂತೆ ವಿವಿಧ ತಾಂತ್ರಿಕತೆ ಬಳಕೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಬಾಕ್ಸೈಟ್‌, ಕೆಂಪು ಕಲ್ಲು ಹಾಗೂ ಮರಳು ಗಣಿಗಾರಿಕೆ ಅಕ್ರಮಗಳ ಕುರಿತು ರಾಜಕಾರಣಿಗಳು ಆರೋಪ -ಪ್ರತ್ಯಾರೋಪಗಳನ್ನು ಮಾಡುತ್ತಿದ್ದರೂ, ನೇರವಾಗಿ ಯಾರ ಹೆಸರೂ ಬಂದಿಲ್ಲ. 2017ರಲ್ಲಿ ವಿಟ್ಲದಲ್ಲಿ, 2016ರಲ್ಲಿ ಬಜ್ಪೆ ಹಾಗೂ ಹತ್ತು ವರ್ಷದ ಹಿಂದೆ ಕಡಬದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟಗಳು ಸಂಭವಿಸಿದ್ದವು.

ಉಡುಪಿ ಜಿಲ್ಲೆಯಲ್ಲಿ ಕರಿ ಕಲ್ಲು ಕ್ವಾರಿ ಯಥೇಚ್ಛವಾಗಿದ್ದು, 116 ಅಧಿಕೃತವಾಗಿವೆ. ಉದ್ಯಮಿಗಳ ಹೆಸರಿನಲ್ಲಿ ಸ್ಥಳೀಯ ರಾಜಕಾರಣಿಗಳು ಕ್ವಾರಿಗಳನ್ನು ನಡೆಸುವ ಬಗ್ಗೆ ಆರೋಪಗಳಿವೆ. ಉಡುಪಿ, ಕಾರ್ಕಳ ಹಾಗೂ ಕುಂದಾಪುರದಲ್ಲಿ ಕ್ವಾರಿಗಳು ಹೆಚ್ಚಾಗಿದ್ದು, ಇಲ್ಲಿಂದ ಕಪ್ಪು ಕಲ್ಲು ರಫ್ತಾಗುತ್ತದೆ.

15 ವರ್ಷಗಳ ಹಿಂದೆ ಕಾರ್ಕಳ ತಾಲ್ಲೂಕಿನ ಪೆರುವಾಜೆ ಬಳಿ ಜಿಲೆಟಿನ್ ಸಾಗಿಸುತ್ತಿದ್ದ ವಾಹನದಲ್ಲಿ ಸ್ಫೋಟ ಸಂಭವಿಸಿತ್ತು.

ಚಿಕ್ಕಮಗಳೂರಿನಲ್ಲಿ 88 ಕಲ್ಲು ಗಣಿಗಾರಿಕೆ, 40 ಕ್ರಷರ್‌ ಘಟಕಗಳು ಇವೆ. ಈ ಪೈಕಿ ಕೆಲವು ರಾಜಕಾರಣಿಗಳ ಸಂಬಂಧಿಕರ ಒಡೆತನದಲ್ಲಿವೆ. ತರೀಕೆರೆ ತಾಲ್ಲೂಕಿನ ನವಿಲುಗುಡ್ಡ ಹಾಗೂ ಸುತ್ತಲೂ ಗಣಿಗಾರಿಕೆ ನಡೆಯುತ್ತಿವೆ.

‘ಚಿಕ್ಕಮಗಳೂರು ಪಶ್ಚಿಮ ಘಟ್ಟದಲ್ಲಿದ್ದು, ಕಲ್ಲು ಗಣಿಗಾರಿಕೆಯಿಂದ ಪರಿಸರಕ್ಕೆ ಧಕ್ಕೆ ತಪ್ಪಿದ್ದಲ್ಲ. ಅದಕ್ಕಾಗಿ ಸಂಪೂರ್ಣವಾಗಿ ಗಣಿಗಾರಿಕೆ ನಿಷೇಧಿಸಬೇಕು’ ಎಂದು ವೈಲ್ಡ್‌ ಕ್ಯಾಟ್‌ ಸಿ ಸಂಸ್ಥೆಯ ಶ್ರೀದೇವ್‌ ಹುಲಿಕೆರೆ ಒತ್ತಾಯಿಸುತ್ತಾರೆ.

ನದಿಗೂ ಒದಗಿದೆ ಅಪಾಯ.

ಹೊಸಪೇಟೆ: ತಾಲ್ಲೂಕಿನ ಬುಕ್ಕಸಾಗರದಲ್ಲಿ ಈಗಲೂ ಅಕ್ರಮ ಕಲ್ಲು ಕ್ವಾರಿ ಗಣಿಗಾರಿಕೆ ನಡೆಯುತ್ತಿದೆ. ತುಂಗಭದ್ರಾ ನದಿ ಪಾತ್ರಕ್ಕೆ ಹೊಂದಿಕೊಂಡಂತೆ ಗಣಿಗಾರಿಕೆ ನಡೆಯುತ್ತಿದ್ದು, ನದಿ ಪಾತ್ರದ ಮಾರ್ಗ ಬದಲಾಗುವ ಆತಂಕ ಎದುರಾಗಿದೆ. ರಾಜಕಾರಣಿಗಳು ನೇರವಾಗಿ ಇದರಲ್ಲಿ ಇಲ್ಲ. ಅವರ ಬೆಂಬಲಿಗರು ಈ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಆಗಾಗ ಸಣ್ಣ ಪ್ರಮಾಣದಲ್ಲಿ ಸ್ಫೋಟಗಳನ್ನು ಮಾಡುತ್ತಿರುತ್ತಾರೆ. ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡ ನಂತರ ಧರ್ಮದಗುಡ್ಡದಲ್ಲಿ ಗಣಿಗಾರಿಕೆ ನಿಂತಿದೆ. ಪುನಃ ಗಣಿಗಾರಿಕೆಗೆ ಅವಕಾಶ ಕಲ್ಪಿಸಬೇಕೆಂಬ ಕೂಗು ಎದ್ದಿದೆ.

ಪ್ರಭಾವಿಗಳ ಹಿಡಿತದಲ್ಲಿ ಕಪ್ಪತಗುಡ್ಡದ ಸೆರಗು.

ಗದಗ: ಕಪ್ಪತಗುಡ್ಡ ಸೆರಗಿನಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಇವೆಲ್ಲದಕ್ಕೂ ಪ್ರಭಾವಿ ರಾಜಕಾರಣಿಗಳ ಕೃಪಾಕಟಾಕ್ಷ ಇದೆ.

ಇಲ್ಲಿರುವ ಕ್ರಷರ್‌ಗಳು ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಪ್ರಭಾವಿ ರಾಜಕಾರಣಿಗಳು, ಅವರ ಸಂಬಂಧಿಕರು ಹಾಗೂ ಹಿಂಬಾಲಕರ ಹೆಸರಿನಲ್ಲಿವೆ. ಕಲ್ಲು ಗಣಿ ಗುತ್ತಿಗೆ ಬೇರೆಯವರ ಹೆಸರಿನಲ್ಲಿದ್ದು, ಬೋರ್‌ ಬ್ಲಾಸ್ಟಿಂಗ್ ನಡೆಯುತ್ತಿದೆ. ಬ್ಲಾಸ್ಟಿಂಗ್ ವೇಳೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಪ್ರಕರಣ ದಾಖಲಾಗಿಲ್ಲ. ಗಣಿಗಾರಿಕೆಯಿಂದ ಉಂಟಾದ ಆಳವಾದ ಗುಂಡಿಯಲ್ಲಿ ನೀರು ತುಂಬಿ, ಅದರಲ್ಲಿ ‌ಜನರು ಮುಳುಗಿ ಸತ್ತ ಘಟನೆಗಳೂ ನಡೆದಿವೆ.

ಕಪ್ಪತ್ತಗುಡ್ಡವನ್ನು ನಾಲ್ಕು ಬ್ಲಾಕ್‌ಗಳಾಗಿ ವಿಂಗಡಿಸಿದ್ದು, ಮೂರನೇ ಬ್ಲಾಕ್‌ನಲ್ಲಿ ಪ್ರಭಾವಿ ರಾಜಕಾರಣಿಗಳ ಕ್ವಾರಿಗಳು ಇವೆ. ಈ ಕ್ರಷರ್‌ಗಳಿಗೆ ನೋಟಿಸ್‌ ಸಹ ನೀಡಿಲ್ಲ.

ಗ್ರಾನೈಟ್ ತ್ಯಾಜ್ಯ: ಕೆರೆಯ ಅಸ್ತಿತ್ವಕ್ಕೆ ಧಕ್ಕೆ

ಬಾಗಲಕೋಟೆ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಹೋಬಳಿಯಲ್ಲಿನ ಗ್ರಾನೈಟ್ ಗಣಿಗಾರಿಕೆಯಿಂದ ಹುನಗುಂದ ತಾಲ್ಲೂಕಿನ ಚಿತ್ತವಾಡಗಿ (ಕಡೂರು) ಕೆರೆ ಅವನತಿಯ ಅಂಚಿಗೆ ತಲುಪಿದೆ. ಕುಷ್ಟಗಿ, ಹುನಗುಂದ ತಾಲ್ಲೂಕುಗಳ ರಾಜಕೀಯ ಮುಖಂಡರ ಹಿಂಬಾಲಕರೇ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದರಿಂದ ಅಧಿಕಾರಿಗಳು ಕೈ ಕಟ್ಟಿಕುಳಿತಿದ್ದು, ಕೆರೆ ಸಂಕಷ್ಟ ಅರಣ್ಯರೋದನವಾಗಿದೆ.

1990ರಿಂದ ಕೆರೆಯ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಲ್ಲಿನ ತ್ಯಾಜ್ಯವನ್ನು ಕೆರೆಯ ಅಂಗಳಕ್ಕೆ ತಂದು ಸುರಿಯಲಾಗುತ್ತಿದೆ. ಕೆರೆಗೆ ತೆರಳುವ ಯರಿಗೋನಾಳ ಮಾರ್ಗ ಕಡೂರ ಗ್ರಾಮದಿಂದ ಹೋಗುವ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುವ ಸರ್ಕಾರಿ ರಸ್ತೆಯನ್ನು ಅಗೆದು ಅಕ್ರಮವಾಗಿ ಗ್ರಾನೈಟ್ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments