ಬೆಂಗಳೂರು: ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ, ಸೋಮವಾರ ತಮಿಳುನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ. ಕೊರೊನಾ ಸೋಂಕು ತಗುಲಿದ್ದರಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದ ಅವರು ನಗರದ ದೇವನಹಳ್ಳಿ ಬಳಿ ಇರುವ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದರು.
ತಮಿಳುನಾಡಿಗೆ ವಾಪಸಾಗುತ್ತಿರುವ ಶಶಿಕಲಾ ಅವರನ್ನು ಸ್ವಾಗತಿಸಲು ನೂರಾರು ಬೆಂಬಲಿಗರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೊಡಗುರ್ಕಿಗೆ ಆಗಮಿಸಿದ್ದಾರೆ.
ಈ ಮಧ್ಯೆ, ತಮಿಳುನಾಡು ಗಡಿಯವರೆಗೂ ಶಶಿಕಲಾ ಅವರ ಸ್ವಾಗತ ಕಾರ್ಯಕ್ರಮಗಳಿಗೆ ಬೆಂಗಳೂರು ಪೊಲೀಸರು ನಿಷೇಧ ಹೇರಿದ್ದಾರೆ.
ಕೋವಿಡ್ ನಿಯಮ ಪಾಲನೆ ಹಾಗೂ ಕಾನೂನು, ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಶಶಿಕಲಾ ಬೆಂಬಲಿಗರು ರ್‍ಯಾಲಿಗಳನ್ನು ನಡೆಸಲು ಮಾಡಿರುವ ಮನವಿಯನ್ನು ಬೆಂಗಳೂರು ಗ್ರಾಮಾಂತರ ಮತ್ತು ನಗರ ಪೊಲೀಸರು ತಿರಸ್ಕರಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಶಶಿಕಲಾ, ಕೆಲ ದಿನಗಳ ಕಾಲ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ, ಅಲ್ಲಿಂದ ಬಿಡುಗಡೆಯಾಗಿ ವಿಶ್ರಾಂತಿ ಪಡೆಯಲು ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು.