ಮಂಗಳೂರು, ಫೆಬ್ರವರಿ 25:ಕೇರಳ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕರ್ನಾಟಕ-ಕೇರಳ ಸಂಪರ್ಕಿಸುವ ಹಲವು ರಸ್ತೆಗಳನ್ನು ಸೋಮವಾರದಿಂದ ಬಂದ್ ಮಾಡಿದೆ.
ಕಾಸರಗೋಡು ಮೂಲದ ವಕೀಲ ಬಿ. ಸುಬ್ಬಯ್ಯ ಈ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ಪೀಠ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಕೇಂದ್ರ ಗೃಹ ಸಚಿವಾಲಯ, ರಾಜ್ಯ ಆರೋಗ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ನೋಟಿಸ್ ನೀಡಿ ವಿಚಾರಣೆ ಮುಂದೂಡಿತು.
ವಕೀಲ ಬಿ. ಸುಬ್ಬಯ್ಯ ಕೋವಿಡ್ ಲಾಕ್ ಡೌನ್ ಅನ್ನು ಕೇಂದ್ರ ಸರ್ಕಾರ ಹಂತ-ಹಂತವಾಗಿ ತೆರವು ಮಾಡಿದೆ. 2021ರ ಜನವರಿ 27ರಂದು ಅನ್ ಲಾನ್ 4.0 ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದರ ಅನ್ವಯ ಅಂತರರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ.
ಆದರೆ, ಫೆಬ್ರವರಿ 18ರಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕದ ದಕ್ಷಿಣ ಕನ್ನಡಕ್ಕೆ ಜನರ ಸಂಚಾರ ನಿಷೇಧಿಸಿದೆ. ಈ ಆದೇಶ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
ಕೇರಳ ಆಕ್ಷೇಪ ಗಡಿಗಳನ್ನು ಬಂದ್ ಮಾಡಿ, ವಾಹನಗಳಿಗೆ ನಿರ್ಬಂಧ ಹೇರಿರುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಆಕ್ಷೇಪ ವ್ಯಕ್ತಪಡಿಸಿದ್ದರು. ಕರ್ನಾಟಕ ಸರ್ಕಾರ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಉಲ್ಲಂಘನೆ ಮಾಡಿದೆ ಎಂದು ಹೇಳಿದ್ದರು.
ಗಡಿಗಳನ್ನು ಬಂದ್ ಮಾಡಿರುವ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಕೇಂದ್ರದ ಒಪ್ಪಿಗೆ ಇಲ್ಲದೇ ಯಾವುದೇ ರಾಜ್ಯವೂ ಗಡಿಗಳನ್ನು ಬಂದ್ ಮಾಡುವಂತಿಲ್ಲ ಎಂದು ತಿಳಿಸಿದ್ದರು.