ಕೊಣಾಜೆ, ಫೆ.10: ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಚಂಚಲಾಕ್ಷಿ ಹಾಗೂ ಉಪಾಧ್ಯಕ್ಷರಾಗಿ ರಾಮಕೃಷ್ಣ ಪಟ್ಟೋರಿ ಮಂಗಳವಾರ ಆಯ್ಕೆಯಾಗಿದ್ದಾರೆ.
ಕೊಣಾಜೆ ಗ್ರಾಪಂಗೆ ಈ ಬಾರಿ 29 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 15, ಕಾಂಗ್ರೆಸ್ ಬೆಂಬಲಿತರು 11 ಹಾಗೂ ಎಸ್ ಡಿಪಿಐ ಬೆಂಬಲಿತರು 3 ಸ್ಥಾನವನ್ನು ಪಡೆದುಕೊಂಡಿದ್ದರು.
ಮೀಸಲಾತಿಯಲ್ಲಿ ಕಾಂಗ್ರೆಸ್ ಗೆ ಒಲಿದ ಅದೃಷ್ಟ:
ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪಟ್ಟಿಯಲ್ಲಿ ಕೊಣಾಜೆ ಗ್ರಾಪಂಗೆ ಎಸ್ ಸಿ ಮಹಿಳೆ ಅವಕಾಶ ಒದಗಿ ಬಂದಿತ್ತು. ಅದರೆ ಬಿಜೆಪಿ ಇಲ್ಲಿ ಅಧಿಕ ಬೆಂಬಲಿತರನ್ನು ಪಡೆದಿದ್ದರೂ ಇವರಲ್ಲಿ ಎಸ್ ಸಿ ಮಹಿಳೆ ಇಲ್ಲದ ಕಾರಣ ಈ ಅದೃಷ್ಟವು ಕಾಂಗ್ರೆಸ್ ಬೆಂಬಲಿತರಿಗೆ ದೊರೆತು ಅಧ್ಯಕ್ಷರಾಗಿ ಚಂಚಲಾಕ್ಷಿ ಅವಿರೋಧವಾಗಿ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ:
ಮಂಗಳವಾರ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರ ಪರವಾಗಿ ಪ್ರೇಮದಾಸ್ ಹಾಗೂ ಬಿಜೆಪಿ ಬೆಂಬಲಿತರ ಪರವಾಗಿ ರಾಮಕೃಷ್ಣ ಪಟ್ಟೋರಿ ಸ್ಪರ್ಧಿಸಿದ್ದರು.
ಚುನಾವಣೆಯಲ್ಲಿ ಎಸ್ ಡಿಪಿಐ ಬೆಂಬಲಿತರು ಕಾಂಗ್ರೆಸ್ ಗೆ ಬೆಂಬಲ ನೀಡಿದ ಪರಿಣಾಮ ಪ್ರೇಮದಾಸ್ 14 ಹಾಗೂ ಬಿಜೆಪಿ ಬೆಂಬಲಿತರ ಒಂದು ಮತವು ಅಸಿಂಧುವಾದ ಕಾರಣ ರಾಮಕೃಷ್ಣ ಪಟ್ಟೋರಿ 14 ಮತವನ್ನು ಪಡೆದಿದ್ದರು.
ಬಳಿಕ ಅದೃಷ್ಟ ಚೀಟಿ ಪರೀಕ್ಷೆಯಲ್ಲಿ ರಾಮಕೃಷ್ಣ ಪಟ್ಟೋರಿ ಆಯ್ಕೆಯಾಗಿದ್ದಾರೆ.
ಬಡವರಿಗೆ ಸೌಲಭ್ಯ:
ಸರಕಾರದಿಂದ ಸಿಗುವ ಸೌಲಭ್ಯ ಅನುದಾನಗಳನ್ನು ಗ್ರಾಪಂ ವ್ಯಾಪ್ತಿಯ ಬಡವರಿಗೆ ಒದಗಿಸಿಕೊಡುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಗ್ರಾಪಂ ನೂತನ ಅಧ್ಯಕ್ಷೆ ಚಂಚಲಾಕ್ಷಿ ತಿಳಿಸಿದ್ದಾರೆ.