ಬೆಂಗಳೂರು: ಬಿಜೆಪಿ ಹೈಕಮಾಂಡ್ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಬಲವಾದ ಏಟು ಕೊಟ್ಟಿದೆ. ಹೈಕಮಾಂಡ್ ಅಣತಿಯಂತೆ ದಶಕಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮತ್ತೊಮ್ಮೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡ್ಡು, ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟಿದೆ. ಇದಕ್ಕೆ ಕಾರಣವಾಗಿರುವುದು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ.
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮತ್ತೊಮ್ಮೆ ಅಧಿಕೃತವಾಗಿ ಹೊಂದಾಣಿಕೆ ಮಾಡಿಕೊಂಡಿವೆ. ವಚನಭ್ರಷ್ಟ ಕುಮಾರಸ್ವಾಮಿ ಎಂದು ಜರಿದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜೆಡಿಎಸ್ ಜೊತೆ ಮತ್ತೊಮ್ಮೆ ದೋಸ್ತಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಂಖ್ಯಾ ಬಲ ಇಲ್ಲದಿದ್ದರೂ ಕಾಂಗ್ರೆಸ್ ಅಭ್ಯರ್ಥಿಯಾಗಿ ನಸೀರ್ ಅಹ್ಮದ್ ಅವರು ನಾಮಪತ್ರ ಸಲ್ಲಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಮೈತ್ರಿ ಅಭ್ಯರ್ಥಿಯಾಗಿ ಹೊರಟ್ಟಿ ಕಣಕ್ಕೆ…!!!
ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ಇಂದು (ಫೆ. 08) ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಮಹಾಲಕ್ಷ್ಮೀ ಅವರಿಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮತ್ತೊಮ್ಮೆ ಹೊಂದಾಣಿಕೆ ಮಾಡಿಕೊಂಡಿವೆ. ಮೈತ್ರಿ ಮೂಲಕ ಚುನಾವಣೆಯಲ್ಲಿ ಹೊರಟ್ಟಿ ಅವರು ಗೆಲ್ಲುವುದು ಖಚಿತವಾಗಿದ್ದು, ವಿಧಾನಪರಿಷತ್ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಅವರ ಹೆಸರು ಘೋಷಣೆ ಬಾಕಿಯಿದೆ.
ಕುತೂಹಲ ಮೂಡಿಸಿದ ಕಾಂಗ್ರೆಸ್…
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಜೀರ್ ಅಹ್ಮದ್ ಅವರು ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅವರಿಗೆ ನಾಮಪತ್ರ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ನಜೀರ್ ಅಹ್ಮದ್ ಅವರು ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್, ಜಮೀರ್ ಅಹ್ಮದ್ ಖಾನ್, ನಾರಾಯಣಸ್ವಾಮಿ ಅವರು ಉಪಸ್ಥಿತರಿದ್ದರು. ಸೂಕ್ತ ಸದಸ್ಯರ ಬೆಂಬಲವಿಲ್ಲದಿದ್ದರೂ ಕಾಂಗ್ರೆಸ್ ಅಭ್ಯರ್ಥಿಯಾಗಿ ನಜೀರ್ ಅಹ್ಮದ್ ಅವರು ನಾಮಪತ್ರ ಸಲ್ಲಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಬಿರುಕು
ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಬಿಜೆಪಿ ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಮಾಜಿ ಪ್ರಧಾನಿ ದೇವೇಗೌಡರು ಕೂಡ ಈ ವಿಚಾರವಾಗಿ ಅಮಿತ್ ಶಾ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ಜೊತೆಗೆ ಮೈತ್ರಿ ಸರ್ಕಾರ ರಚಿಸಿದ್ದ ಜೆಡಿಎಸ್ ನಾಯಕರು 2018 ಡಿಸೆಂಬರ್ 12ರಂದು ಪರಿಷತ್ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರು. ಮೈತ್ರಿ ಸರ್ಕಾರದ ಪತನದ ಬಳಿಕ ವಿಧಾನಪರಿಷತ್‌ನಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ.
ರಾಜೀನಾಮೆ ಸಲ್ಲಿಸಿದ್ದ ಪ್ರತಾಪಚಂದ್ರ ಶೆಟ್ಟಿ
ತಮ್ಮ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದ ಹಿನ್ನೆಲೆಯಲ್ಲಿ ಫೆ. 05 ರಂದು ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದಕ್ಕೂ ಮೊದಲು ವಿಧಾನಪರಿಷತ್‌ನಲ್ಲಿ ಡಿಸೆಂಬರ್ 15, 2020ರಂದು ಅಹಿತಕರ ಘಟನೆ ನಡೆದಿತ್ತು. ಅದರಿಂದ ಮನನೊಂದು ಉಪ ಸಭಾಪತಿಯಾಗಿದ್ದ ಜೆಡಿಎಸ್ ಸದಸ್ಯರಾಗಿದ್ದ ಎಸ್.ಎಲ್. ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಹೀಗಾಗಿ ಇಡೀ ಪ್ರಕರಣ ರಾಜ್ಯದ ರಾಜಕೀಯ ಇತಿಹಾಸಕ್ಕೆ ಒಂದು ಕಪ್ಪು ಚುಕ್ಕೆಯಂತಾಗಿದೆ. ಇದೀಗ ಬಸವರಾಜ್ ಹೊರಟ್ಟಿ ಅವರು ಪರಿಷತ್ ಸಭಾಪತಿಗಳಾಗುವ ಮೂಲಕ ಆ ಎಲ್ಲ ವಿವಾದಗಳಿಗೆ ತೆರೆ ಎಳೆಯಲಿದ್ದಾರೆ ಎನ್ನಲಾಗಿದೆ.