ಕೋಲಾರ: ‘ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣಾ ಮೈತ್ರಿ ಗೊಂದಲವು ಸಣ್ಣ ವಿಚಾರ. ಸ್ಥಳೀಯ ರಾಜಕೀಯದಲ್ಲಿ ಈ ರೀತಿ ಇದ್ದೇ ಇರುತ್ತದೆ. ಇದನ್ನು ಪಕ್ಷದೊಳಗೆ ಬಗೆಹರಿಸಿಕೊಳ್ಳುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರ ಪುತ್ರನ ಮದುವೆಗೆಂದು ದೆಹಲಿಗೆ ಹೋಗಿದ್ದರು ಅಷ್ಟೇ. ನಾನೂ ಹೋಗಬೇಕಿತ್ತು. ಆದರೆ, ಮನೆ ಕಾರ್ಯಕ್ರಮ ಇದ್ದಿದ್ದರಿಂದ ಹೋಗಲು ಆಗಲಿಲ್ಲ’ ಎಂದರು.
‘ಮೈಸೂರು ಮೇಯರ್ ಚುನಾವಣೆ ವಿಚಾರವಾಗಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರಿಗೆ ಕರೆ ಮಾಡಿದ್ದು ನಿಜ.
ನಮಗೆ ಅವರು ಈ ಹಿಂದೆ ಮಾತು ಕೊಟ್ಟಿದ್ದರು. ಅವರು ಈ ವರ್ಷ ಮೈತ್ರಿ ಮುಂದುವರಿಸಿ ನಮಗೆ ಅಧಿಕಾರ ಬಿಟ್ಟು ಕೊಡಬೇಕಿತ್ತು. ಅದನ್ನು ನಡೆಸಿಕೊಡುತ್ತಾರೆ ಅಂತ ನಂಬಿದ್ದೆ. ಜೆಡಿಎಸ್ ಜತೆಗೆ ಮೈತ್ರಿ ವಿಚಾರವಾಗಿ ಶಾಸಕ ತನ್ವೀರ್ ಸೇಠ್ ಜತೆ ಚರ್ಚಿಸುತ್ತೇನೆ’ ಎಂದು ಹೇಳಿದರು.
‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಾದಿಗೆ ಪೈಪೋಟಿ ಇಲ್ಲ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಬಿಜೆಪಿಯವರಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅರ್ಥವಾಗಿದೆ, ಬಹಳ ಸಂತೋಷ. ನಾಡಿನ ಜನ ಮತ್ತೆ ಕಾಂಗ್ರೆಸ್‌ನ ಕೈ ಹಿಡಿಯುತ್ತಾರೆ. ಯಾವ ಕ್ಷೇತ್ರಗಳಲ್ಲಿ ಸೊತ್ತಿದೇವೋ ಅಲ್ಲಿಯೇ ಪಕ್ಷ ಸಂಘಟನೆ ಮಾಡುತ್ತೇವೆ. 1999ರಲ್ಲಿ ಎಸ್.ಎಂ.ಕೃಷ್ಣ ಅವರು ಪಾಂಚಜನ್ಯ ಮೊಳಗಿಸಿ ಅಧಿಕಾರಕ್ಕೆ ಬಂದರು. ಅದೇ ರೀತಿ ನಾನು ಪಾಂಚಜನ್ಯ ಮೊಳಗಿಸಲಿದ್ದೇನೆ’ ಎಂದರು.