Wednesday, May 31, 2023
HomeUncategorizedರಾಜ್ಯದಲ್ಲಿ 2 ಹಂತಗಳ ಪಂಚಾಯತ್ ವ್ಯವಸ್ಥೆ ಜಾರಿಗೆ: ಸಚಿವ ಈಶ್ವರಪ್ಪ

ರಾಜ್ಯದಲ್ಲಿ 2 ಹಂತಗಳ ಪಂಚಾಯತ್ ವ್ಯವಸ್ಥೆ ಜಾರಿಗೆ: ಸಚಿವ ಈಶ್ವರಪ್ಪ

- Advertisement -


Renault

Renault
Renault

- Advertisement -

ಬೆಂಗಳೂರು: ತಾಲೂಕು ಪಂಚಾಯತ್‌ ವ್ಯವಸ್ಥೆ ರದ್ದತಿಗೆ ಮುಹೂರ್ತ ನಿಗದಿಯಾಗಿದ್ದು, ರಾಜ್ಯದಲ್ಲಿ 2 ಹಂತಗಳ ಪಂಚಾಯತ್‌ ವ್ಯವಸ್ಥೆ ಜಾರಿಗೆ ಬರುವ ದಿನಗಳು ಹತ್ತಿರವಾಗುತ್ತಿವೆ.

ರಾಜ್ಯದಲ್ಲಿ ತಾಲೂಕು ಪಂಚಾಯತ್‌ ರದ್ದು ಪಡಿಸಿ ಕೇವಲ ಗ್ರಾಮ ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ವ್ಯವಸ್ಥೆಗಳನ್ನು ಮಾತ್ರ ಉಳಿಸಿ ಕೊಳ್ಳುವುದಕ್ಕೆ ಸಂಬಂಧಿಸಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಗುರುವಾರ ಶೂನ್ಯ ವೇಳೆಯಲ್ಲಿ ಬಿಜೆಪಿಯ ಕುಮಾರ್‌ ಬಂಗಾರಪ್ಪ ಪ್ರಸ್ತಾಪಿಸಿದ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಸದ್ಯ ರಾಜ್ಯದಲ್ಲಿ ತ್ರಿಸ್ತರ ಪಂಚಾಯತ್‌ ವ್ಯವಸ್ಥೆ ಇದೆ.

ಆದರೆ ತಾ.ಪಂ.ಗೆ ಹೆಚ್ಚಿನ ಅನುದಾನವಿಲ್ಲದ ಕಾರಣ ಸಕ್ರಿಯವಾಗಿಲ್ಲ.

ಜತೆಗೆ ಕಾರ್ಯಕ್ರಮಗಳು ಪುನರಾವರ್ತನೆಯಾಗಿ ಸಮಸ್ಯೆಯಾಗುತ್ತಿದೆ. ಹಾಗಾಗಿ ತಾ.ಪಂ. ವ್ಯವಸ್ಥೆ ಕೈಬಿಟ್ಟರೆ ಆಡಳಿತಾತ್ಮಕ ಅನುಕೂಲದ ಜತೆಗೆ ವೆಚ್ಚ ಇಳಿಕೆಗೂ ನೆರವಾಗಲಿದೆ. ಇದಕ್ಕೆ ಸಂವಿಧಾನದ ತಿದ್ದುಪಡಿ ಅಗತ್ಯವಿದೆ. ಆದರೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಎರಡು ಸ್ತರದ ವ್ಯವಸ್ಥೆ ಜಾರಿಯಲ್ಲಿದ್ದು, ಅದನ್ನು ಪರಿಶೀಲಿಸಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಈಶ್ವರಪ್ಪ ಹೇಳಿದರು.

ಸಮನ್ವಯದ ಕೊರತೆ
ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ ಮಾತನಾಡಿ, ರಾಜೀವ್‌ ಗಾಂಧಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಮೂರು ಹಂತಗಳ ವ್ಯವಸ್ಥೆ ಜಾರಿಗೊಳಿಸಿದರು. ಆದರೆ ಜಿ.ಪಂ. ಮತ್ತು ತಾ.ಪಂ. ಏನು ಮಾಡುತ್ತಿವೆ ಎಂಬುದು ಎರಡೂ ಹಂತದ ಆಡಳಿತಗಳಿಗೂ ಗೊತ್ತಿಲ್ಲ. 2 ಆಡಳಿತಗಳ ನಡುವೆ ಸಮನ್ವಯವೇ ಇಲ್ಲವಾಗಿದೆ. ಇದರಿಂದ ಕಾಮಗಾರಿಗಳು ಪುನರಾವರ್ತನೆಯಾಗುತ್ತಿವೆ. ಒಂದು ರಸ್ತೆ ಅಭಿವೃದ್ಧಿಪಡಿಸಿದರೆ 3 ಕಡೆ ಬಿಲ್‌ ಪಾವತಿಯಾಗುತ್ತಿದೆ ಎಂದು ಸಮಸ್ಯೆಯನ್ನು ಬಿಡಿಸಿಟ್ಟರು.

ಸಂಪುಟ ಸಭೆಯಲ್ಲಿ ತೀರ್ಮಾನ 
ಶೂನ್ಯ ವೇಳೆಯಲ್ಲಿ ಪ್ರಸ್ತಾವವಾಗಿರುವ ಈ ವಿಚಾರ ಗಂಭೀರವಾಗಿದೆ. ತಾ.ಪಂ. ವ್ಯವಸ್ಥೆ ದುರ್ಬಲವಾಗುತ್ತಿದೆ. ಈ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆಗೆ ಹೇಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಪರಿಶೀಲಿಸ ಲಾಗುವುದು. ಸರಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್‌. ಈಶ್ವರಪ್ಪ, ಈ ಬಗ್ಗೆ ಚರ್ಚೆ ನಡೆಸುತ್ತ ಹೋದರೆ ವಿಳಂಬವಾಗಬಹುದು. ಹಾಗಾಗಿ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸದನ ಬೇರೊಂದು ರೀತಿಯಲ್ಲಿ ಚರ್ಚೆಗೆ ಅವಕಾಶ ನೀಡಲಿ ಎಂದು ಹೇಳಿದರು.

ಸದ್ಯದಲ್ಲೇ ಕೇಂದ್ರಕ್ಕೆ ಪ್ರಸ್ತಾವ
ತಾ.ಪಂ. ರದ್ದತಿ ಕುರಿತ ವಿಚಾರದ ಬಗ್ಗೆ ಮಾತನಾಡಿದ ಸಚಿವ ಕೆ.ಎಸ್‌. ಈಶ್ವರಪ್ಪ, ಸಂವಿಧಾನದ 243ನೇ ಪರಿಚ್ಛೇದದ 73ನೇ ತಿದ್ದುಪಡಿ ಅನ್ವಯ ಮೂರು ಹಂತಗಳ ಪಂಚಾಯತ್‌ರಾಜ್‌ ವ್ಯವಸ್ಥೆ ಜಾರಿಯಲ್ಲಿದೆ. ಆದರೆ 20 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ ರಾಜ್ಯಗಳಿಗೆ ವಿನಾಯಿತಿ ಇದೆ. ರಾಜ್ಯದಲ್ಲೂ ಎರಡು ಹಂತದ ಪಂಚಾಯತ್‌ ವ್ಯವಸ್ಥೆ ಸೂಕ್ತ ಎಂಬ ಅಭಿಪ್ರಾಯ ಹಲವು ಸದಸ್ಯರದು. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಬಳಿಕ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲೂ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಶಾಸಕರು ಅಭಿಪ್ರಾಯ ತಿಳಿಸಿದರೆ ಸಂಪುಟದಲ್ಲಿ ಚರ್ಚಿಸಲು ಅನುಕೂಲವಾಗಲಿದೆ ಎಂದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments