ಶಿವಮೊಗ್ಗ: ಕುರುಬರನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟದಲ್ಲಿ ಸಿದ್ದರಾಮಯ್ಯ ಅವರೂ ಭಾಗವಹಿಸಬೇಕು ಎನ್ನುವುದು ಸಮುದಾಯದ ಜನರ ಅಪೇಕ್ಷೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಅವರು ಸುದ್ದಿಗಾರರ ಜತೆ ಮಾತನಾಡಿ, ಮೀಸಲಾತಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆದ ಕುರುಬರ ಸಮಾವೇಶ ಯಶಸ್ವಿಯಾಗಿದೆ. ಕುರುಬ ಸಮುದಾಯದ ಇತಿಹಾಸದಲ್ಲಿಯೇ ದೊಡ್ಡ ಸಮಾವೇಶ. ನಿರಂಜನಾನಂದ ಶ್ರೀ, ಈಶ್ವರಾನಂದಶ್ರೀ ಸೇರಿದಂತೆ ಸಮುದಾಯದ ಗುರುಗಳು, ಹಿರಿಯರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ಕುರುಬರ ಸಮಾವೇಶಕ್ಕೆ ತಾವು ಅಥವಾ ಪಕ್ಷ ಹಣ ಕೊಟ್ಟಿಲ್ಲ. ವಾಹನಗಳಿಗೂ ಹಣ ನೀಡಿಲ್ಲ. ಜನರೇ ಸ್ವಯಂ ಪ್ರೇರಿತರಾಗಿ ಸುನಾಮಿ ರೀತಿ ಬಂದಿದ್ದರು. ಸಿದ್ದರಾಮಯ್ಯ ಹೊರತುಪಡಿಸಿ ಎಲ್ಲರೂ ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗವಹಿಸಿದ್ದರು.
ಸಮುದಾಯ ಅವರನ್ನು ಮುಖ್ಯಮಂತ್ರಿ ಮಾಡಿದೆ. ಹಾಗಾಗಿ, ಜನರು ಅವರ ಉಪಸ್ಥಿತಿ ಅಪೇಕ್ಷಿಸಿದ್ದರು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕುರುಬ ಸಮುದಾಯಕ್ಕೆ ಅನುದಾನ ನೀಡಿದ್ದಾರೆ. ಕನಕ ಜಯಂತಿಗೆ ರಜೆ ನೀಡಿದ್ದಾರೆ. ಎಸ್‌ಟಿ ಮೀಸಲಾತಿ ನೀಡುವುದು ಬಾಕಿ ಇದೆ. ಮುಂದಿನ ಹಂತದಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿ ಜತೆ ಮೀಸಲಾತಿ ಹೋರಾಟ ಸಮಿತಿ ಚರ್ಚಿಸಲಿದೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಪ್ರಧಾನಿ, ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.