ಮಂಗಳೂರು: ಬಿಜೆಪಿ ನೇತೃತ್ವದ ಆಡಳಿತ ಮಂಡಿಸಿದ ಮಹಾನಗರ ಪಾಲಿಕೆ ಬಜೆಟ್ ಜನ ವಿರೋಧಿಯಾಗಿದೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್ ಆರೋಪಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದ ಆರ್ಥಿಕತೆ ಕುಸಿದಿರುವ ಸಂದರ್ಭದಲ್ಲಿ, ಆಸ್ತಿ ತೆರಿಗೆ, ನೀರಿನ ತೆರಿಗೆ, ವ್ಯಾಪಾರ ಪರವಾನಗಿ ಶುಲ್ಕ, ಘನತ್ಯಾಜ್ಯ ನಿರ್ವಹಣೆ ಶುಲ್ಕ ಹೆಚ್ಚಳವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಜನರು ಸಂಕಷ್ಟದಲ್ಲಿರುವುದರಿಂದ 2020ರ ಮಾರ್ಚ್‌ನಿಂದ ಜುಲೈವರೆಗಿನ ನೀರಿನ ಬಿಲ್ ಮನ್ನಾ ಮಾಡುವಂತೆ ಮೇಯರ್ ಹಾಗೂ ಆಯುಕ್ತರಿಗೆ ವಿನಂತಿಪತ್ರ ನೀಡಲಾಗಿದ್ದರೂ, ಇದು ಕಾರ್ಯರೂಪಕ್ಕೆ ಬಂದಿಲ್ಲ’ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿರುವಾಗ 24 ಸಾವಿರ ಲೀಟರ್ ನೀರನ್ನು ₹ 65ಕ್ಕೆ ನೀಡಿದರೆ, ಬಿಜೆಪಿ 10 ಸಾವಿರ ಲೀಟರ್ ನೀರನ್ನು ₹ 60ಕ್ಕೆ ನೀಡಲು ಮುಂದಾಗಿದೆ ಎಂದು ಟೀಕಿಸಿದರು.
ಪಾಲಿಕೆ ಸದಸ್ಯ ಶಶಿಧರ ಹೆಗ್ಡೆ ಮಾತನಾಡಿ, ‘ತೆರಿಗೆ ಹೆಚ್ಚಿಸದೇ ಮೂಲ ಸೌಕರ್ಯ ಹೆಚ್ಚಿಸುವುದು ಆಡಳಿತದ ಕರ್ತವ್ಯ. ಲಭ್ಯ ಸಂಪನ್ಮೂಲ ಬಳಸಿ, ಆದಾಯ ಪಡೆಯಲು ಸಾಧ್ಯವಿದೆ. ಖಾಲಿ ಇರುವ ಜಮೀನುಗಳೀಗೆ ತೆರಿಗೆ ವಿಧಿಸಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಾಗ ಇಂತಹ ಜನರಿಗೆ ಹೊರೆಯಾಗುವ ನಿಯಮ ತಂದಿರಲಿಲ್ಲ’ ಎಂದರು.
ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಪ್ರಾಮುಖ್ಯತೆ ನೀಡಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವ ಪ್ರಸ್ತಾಪ ಇಲ್ಲ’ ಎಂದು ಪಾಲಿಕೆ ಸದಸ್ಯ ನವೀನ್ ಡಿಸೋಜ ಆರೋಪಿಸಿದರು. ಪಾಲಿಕೆ ಸದಸ್ಯರಾದ ಎ.ಸಿ. ವಿನಯರಾಜ್, ಲ್ಯಾನ್ಸೆಲಾಟ್ ಪಿಂಟೊ, ಪ್ರವೀಣಚಂದ್ರ ಆಳ್ವ, ಲತಿಫ್ ಇದ್ದರು.