ಬೆಂಗಳೂರು: ಜಿಲ್ಲಾ ಪ್ರವಾಸದಿಂದ ಹಿಂದಿರುಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ಸರ್ಜರಿ ಕುರಿತಾಗಿ ಸಾಲು ಸಾಲು ಸಭೆ ನಡೆಸಲಿದ್ದಾರೆ. ಇಂದು ಸಂಜೆ ಆಪ್ತ ಸಚಿವರಿಗೆ ಕಾವೇರಿ ನಿವಾಸಕ್ಕೆ ಆಗಮಿಸುವಂತೆ ಸಿಎಂ ಬುಲಾವ್ ನೀಡಿದ್ದಾರೆ. ಇಂದು ಸಂಜೆ ನಡೆಯುವ ಸಭೆಯಲ್ಲಿಯೇ ನೂತನ ಸಚಿವ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಲಿದೆ ಎನ್ನಲಾಗಿದೆ.
ಇಂದು ಸಂಜೆ ಸಭೆಯಲ್ಲಿ ಸಿಎಂ ಲೆಕ್ಕಚಾರದಂತೆ ಎಲ್ಲವೂ ನಡೆದ್ರೆ ಸಂಜೆಯೇ ನೂತನ ಸಚಿವರ ಹೆಸರನ್ನು ಫೈನಲ್ ಮಾಡಿ, ಪದಗ್ರಹಣದ ದಿನಾಂಕವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗಮನಕ್ಕೆ ತರಲಿದ್ದಾರೆ. ಗ್ರೀನ್ ಸಿಗ್ನಲ್ ಸಿಕ್ಕರೆ ನಾಳೆಯೇ ಅಂದ್ರೆ ಶುಭ ಶುಕ್ರವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.
ಸಂಪುಟ ಸರ್ಜರಿ ವೇಳೆ ಕಳಪೆ ಸಾಧನೆ ಮಾಡಿರುವ ಸಚಿವರ ಸ್ಥಾನಕ್ಕೆ ಕುತ್ತು ಬರಲಿದೆ. ಕಳೆದ 5 ತಿಂಗಳ ಸಚಿವರ ರಿಪೋರ್ಟ್ ಕಾರ್ಡ್ ಪಡೆದಿರುವ ಹೈಕಮಾಂಡ್ ಯಾರನ್ನು ಕೈ ಬಿಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ಇದೀಗ ಅದೇ ಪಟ್ಟಿ ಜೊತೆ ಸಿಎಂ ಅಪ್ತ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.