ಕೊರೋನಾ ಸೋಂಕಿನಿಂದ ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸಿದ ಭಾರತ ಇದೀಗ ಮತ್ತಷ್ಟು ಬಲಶಾಲಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಪ್ರಧಾನಿ ‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, 2021 ರಲ್ಲಿ ಭಾರತದ ಶಕ್ತಿ ಇನ್ನಷ್ಟು ವೃದ್ಧಿಸಲಿದೆ ಎಂದು ಹೇಳಿದ್ದಾರೆ.
ಇನ್ನೇನು ಕೇವಲ 4 ದಿನಗಳಲ್ಲಿ 2021ಕ್ಕೆ ಕಾಲಿಡಲಿದ್ದೇವೆ. 2020ರ ಕೊನೆಯ “ಮನ್ ಕೀ ಬಾತ್” ಇದು. “ಇಂದು ನನ್ನ ಮುಂದೆ ನಿಮ್ಮ ನೂರಾರು ಪತ್ರಗಳಿವೆ. “ಹೊಸ ವರ್ಷದಲ್ಲಿ ನಾವು ಎಲ್ಲರಿಗೂ ಶುಭಾಶಯ ಹೇಳುತ್ತೇವೆ. ನಾವು ದೇಶಕ್ಕೆ ಶುಭಾಶಯ ಹೇಳೋಣ. ದೇಶದಕ್ಕೆ ಒಳ್ಳೆಯದಾಗಲಿ ಎಂದು ಆಶಿಸೋಣ ಎಂದು ಅಂಜಲಿ ಅವರು ಪತ್ರವನ್ನು ಬರೆದಿದ್ದಾರೆ” ನರೇಂದ್ರ ಮೋದಿ ತಿಳಿಸಿದರು.
ಕೊರೋನಾ ಕಾರಣದಿಂದ ಅನೇಕ ಸಮಸ್ಯೆ ಎದುರಾಗಿದೆ. ಸಂಕಷ್ಟ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಭಾರತ ಮತ್ತಷ್ಟು ಬಲವಾಗಲಿದೆ. ಭಾರತದಲ್ಲಿ ಉತ್ಪಾದನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಮಸ್ಯೆ ಎದುರಿಸಿದ್ದೇವೆ. ಈ ಸಂಕಷ್ಟಗಳು ನಮಗೆ ಹೊಸ ಪಾಠ ಕಲಿಸಿಕೊಟ್ಟಿದೆ ಎಂದರು.
2021ರಲ್ಲಿ ಭಾರತ ಹೊಸ ಸಾಧನೆಯ ಶಿಖರಕ್ಕೆ ಏರಲಿದೆ. ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಕೋವಿಡ್ ನಡುವೆಯೇ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಿ ಎಂಬ ಕೂಗು ಕೂಡ ಹೆಚ್ಚಾಗುತ್ತಿದೆ. ಜೀರೋ ಎಫೆಕ್ಟ್ ಜೀರೋ ಡಿಫೆಕ್ಟ್ ಯೋಚನೆಯಿಂದ ಕೆಲಸ ಮಾಡುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.
ದೇಶಿ ಉತ್ಪನ್ನಗಳನ್ನು ಬಳಕೆ ಮಾಡುತ್ತೇವೆ ಎಂದು ಹೊಸ ವರ್ಷದಲ್ಲಿ ಸಂಕಲ್ಪ ಮಾಡಿ. ಸ್ವದೇಶಿ ವಸ್ತುಗಳಲ್ಲಿ ನಮ್ಮ ದೇಶದ ಜನರ ಬೆವರಿನ ಶ್ರಮ ಅಡಗಿದೆ. ನಿಮ್ಮ ಸಂಕಲ್ಪ ನಮ್ಮ ದೇಶದ ಜನರಿಗೆ ಸಹಾಯಕವಾಗಲಿದೆ. ದೇಶದಲ್ಲಿ ಸ್ಟಾರ್ಟ್ ಅಪ್ ಗಳು ಮುಂದೆ ಬರಬೇಕು ಎಂದರು.
ದೇಶದಲ್ಲಿ ಚಿರತೆಗಳ ಸಂಖ್ಯೆ ಶೇಕಡ 60 ರಷ್ಟು ಹೆಚ್ಚಾಗಿದೆ. ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಚಿರತೆಗಳ ಸಂಖ್ಯೆ ಗಣನೀಯವಾಗಿದೆ ಎಂದರು.