ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹೆಸರಿನಲ್ಲಿ ನೀವೇನಾದ್ರೂ ಪ್ಲ್ಯಾನ್ ಹಾಕಿದ್ದರೆ ಎಚ್ಚರ. ಪೊಲೀಸ್ ಇಲಾಖೆಯು ಸಿಕ್ಕಾಪಟೆ ಟೈಟ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ನಿರ್ಲಕ್ಷ್ಯ ವಹಿಸಿದರೆ ಕಠಿಣ ಶಿಕ್ಷೆ ಪಕ್ಕಾ.
ಈ ಕುರಿತು ಮಾಹಿತಿ ನೀಡಿದ ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ , ಡಿ.31ರ ರಾತ್ರಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಮ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆಗಳಲ್ಲಿ ರಾತ್ರಿ 8ರಿಂದ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧವಾಗಿರುತ್ತದೆ.
ಇಲ್ಲಿನ ಹೊಟೇಲ್ , ರೆಸ್ಟೋರೆಂಟ್, ಪಬ್ಗಳಿಗೆ ಯಾರಾದರೂ ಬರಬೇಕಾದರೆ ಮೊದಲೇ ಬುಕ್ಕಿಂಗ್ ಮಾಡಿರಬೇಕು. ಆ ಬುಕ್ಕಿಂಗ್ ದಾಖಲೆಗಳನ್ನು ಚೆಕ್ಪೋಸ್ಟ್ನಲ್ಲಿರುವ ಪೊಲೀಸರು ಪರಿಶೀಲಿಸಿ, ಅವರು ಹೋಗಬೇಕಾದ ರೆಸ್ಟೋರೆಂಟ್, ಹೊಟೇಲ್ ಗಳಿಗೆ ನಡೆದುಕೊಂಡು ಹೋಗಲು ಅನುವು ಮಾಡಿಕೊಡುತ್ತಾರೆ ಎಂದು ರವಿಕಾಂತೇಗೌಡ ಹೇಳಿದರು.
ಹೊಸ ವರ್ಷದ ಹಿನ್ನಲೆಯಲ್ಲಿ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಭದ್ರತೆಯಾಗಿ 2,500 ಸಂಚಾರಿ ಪೊಲೀಸರನ್ನು ನಗರದಾಧ್ಯಂತ ನಿಯೋಜಿಸಲಾಗಿದೆ. ಫ್ಲೈಓವರ್ ಮೇಲೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಇನ್ನು ಮದ್ಯಸೇವನೆ ಮಾಡಿ ವಾಹನ ಚಾಲನೆ ಮಾಡುವಂತಿಲ್ಲ. ಈಗ ಕೊರೋನಾ ಇರುವ ಕಾರಣ ಹೇಗೂ ಪೊಲೀಸರು ಮದ್ಯ ಸೇವನೆ ತಪಾಸಣೆ ಮಾಡೋದಿಲ್ಲ ಎಂದು ಭಾವಿಸುವುದು ಬೇಡ. 191 ಪಾಯಿಂಟ್ಗಳಲ್ಲಿ ಪಿಕ್ಅಪ್ ಸ್ಕ್ವಾಡ್ಗಳನ್ನು ನೇಮಕ ಮಾಡಲಾಗಿದ್ದು, ಡ್ರಿಂಕ್ ಆಯಂಡ್ ಡ್ರೈವ್ ತಪಾಸಣೆಗೆ ರಕ್ತದ ಮಾದರಿ ತೆಗೆದುಕೊಳ್ಳಲಾಗುವುದು. ಒಮ್ಮೆ ರಕ್ತಪರೀಕ್ಷೆಯಲ್ಲಿ ಕುಡಿದು ಗಾಡಿ ಓಡಿಸಿದ್ದು ಸಾಬೀತಾದರೆ, ಅಂಥವರ ವಿರುದ್ಧ ಸಿಆರ್ಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲಾಗುವುದು ಎಂದು ತಿಳಿಸಿದರು.