ನವದೆಹಲಿ 13,000 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಪರಾರಿಯಾದ ವಜ್ರೋದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆಯೇ ಎಂಬ ಬಗ್ಗೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತನ್ನ ತೀರ್ಪನ್ನು ಶೀಘ್ರವೇ ಪ್ರಕಟಿಸಲಿದೆ. ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯ ಕುರಿತ ವಿಚಾರಣೆಯನ್ನು ಯುಕೆ ನ್ಯಾಯಾಲಯ ಜನವರಿ 8ರಂದು ಪೂರ್ಣಗೊಳಿಸಿತು. ಫೆಬ್ರವರಿ 25 ರಂದು ತನ್ನ ಅಂತಿಮ ತೀರ್ಪಿನ ದಿನಾಂಕ ನಿಗದಿಪಡಿಸಿದೆ.

ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿ ಇರುವ ನೀರವ್​ ಅವರು ವಿಡಿಯೋ ಲಿಂಕ್​ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಭಾರತೀಯ ತನಿಖಾ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ನೀರವ್ ಅವರು ‘ವಂಚನೆಯಲ್ಲಿ ಭಾಗಿಯಾಗಿ, ಅಕ್ರಮವಾಗಿ ಹಣ ವರ್ಗಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.

ನೀರವ್ ಮೋದಿ ಅವರು ಬ್ಯಾಂಕ್ ಅಧಿಕಾರಿಗಳೊಂದಿಗೆ ಪಿತೂರಿ ನಡೆಸಿದ ಬಳಿಕ ತಮ್ಮ ಮೂರು ಸಂಸ್ಥೆಗಳಾದ ಡೈಮಂಡ್ಸ್ ಆರ್ ಅಸ್, ಸೋಲಾರ್​ ರಫ್ತು ಮತ್ತು ಸ್ಟೆಲ್ಲಾರ್ ಡೈಮಂಡ್ಸ್ ಬಳಸಿ ಬ್ಯಾಂಕ್‌ಗಳಿಗೆ ಮೋಸ ಮಾಡಿದ್ದಾರೆ. ಪ್ರಕರಣದಲ್ಲಿ ಸಾಕ್ಷಿ ಹೇಳುವವರಿಗೂ ಮಾರಣಾಂತಿಕ ಬೆದರಿಕೆ ಹಾಕಿದ್ದಾರೆ. ತನ್ನ ವಿರುದ್ಧ ಸಾಕ್ಷ್ಯ ಹೇಳದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಸಿಪಿಎಸ್ ನ್ಯಾಯಾಲಯಕ್ಕೆ ತಿಳಿಸಿತು.

ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಮೋದಿಯವರ ಮಾನಸಿಕ ಸ್ಥಿತಿ ಎದುರಿಸಲು ಯಾವುದೇ ವ್ಯವಸ್ಥೆಗಳಿಲ್ಲ. ಅಲ್ಲಿನ ಜೈಲು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಹೆಚ್ಚಿಸುತ್ತದೆ ಎಂದು ನೀರವ್ ಮೋದಿಯ ಕಾನೂನು ಸಲಹೆಗಾರ ಕ್ಲೇರ್ ಮಾಂಟ್ಗೊಮೆರಿ ಹೇಳಿದ್ದಾರೆ.

ಆರ್ಥರ್ ರೋಡ್ ಜೈಲು ಇಂತಹ ಆರೋಗ್ಯ ಪರಿಸ್ಥಿತಿ ನಿಭಾಯಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ. ಜೈಲಿನ ಹತ್ತಿರ ಮೂರು ಆಸ್ಪತ್ರೆಗಳಿವೆ ಎಂದು ಭಾರತೀಯ ಅಧಿಕಾರಿಗಳು ಯುಕೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆರ್ಥರ್ ರಸ್ತೆ ಜೈಲಿನ ಬ್ಯಾರಕ್ ಸಂಖ್ಯೆ 12 ಅನ್ನು ಸಿದ್ಧಪಡಿಸಲಾಗಿದೆ.

ಅಸ್ಸಾಂಜೆ (ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ) ಪ್ರಕರಣದಂತೆ ಇಲ್ಲಿನ ಸಮಸ್ಯೆಗಳು ಒಂದೇ ರೀತಿಯಾಗಿವೆ. ನೀರವ್​ ಮಾನಸಿಕ ಸ್ಥಿತಿ ಮತ್ತು ಭಾರತದಲ್ಲಿ ಜೈಲು ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅವರು ಪಡೆಯುವ ಚಿಕಿತ್ಸೆಯತ್ತ ಗಮನಹರಿಸಬೇಕು ಎಂದು ಮಾಂಟ್ಗೊಮೆರಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here