ತುಳುನಾಡಿನ ವಿಶೇಷ ಕಂಕನಾಡಿ ಗರೋಡಿ ಜಾತ್ರೆ!
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕಂಕನಾಡಿಯ ಗರೋಡಿ ( Garodi ) ಜಾತ್ರೆ ಅಂದರೆ ಎಲ್ಲರಿಗೂ ಸಂಭ್ರಮ. ಅಲ್ಲಿ ಭಕ್ತಿಗೆ ಮತ್ತು ತುಳುನಾಡ ವೀರ ಪುರುಷರಿಗೆ ನೀಡುವ ವಿಶೇಷ ಗೌರವ. ಜನರು ಜಾತ್ರೆಯ ಸಂದರ್ಭ ಲಕ್ಷೋಪಾದಿಯಲ್ಲಿ ಸೇರುವುದಕ್ಕೆ ಮತ್ತು ದಿನನಿತ್ಯ ಕ್ಷೇತ್ರಕ್ಕೆ ಬರುವುದಕ್ಕೆ ತುಂಬಾ ವ್ಯತ್ಯಾಸವಿದೆ.

ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಆರಂಭವಾಗುವ ಹಿನ್ನೆಲೆಯಲ್ಲಿ ಈ ಜಾತ್ರಾ ಮಹೋತ್ಸವಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಈ ನೇಮೋತ್ಸವದಂದು ಹಲವಾರು ಭಕ್ತರು ತಾವು ಈ ವರ್ಷದಲ್ಲಿ ದೈವಗಳ ಅನುಗ್ರಹಕ್ಕೆ ಪಾತ್ರರಾದ ವಿಚಾರವನ್ನು ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ಮುಂದಿನ ವರ್ಷದ ತಮ್ಮ ಯೋಜನೆಗಳಿಗೆ ದೈವಗಳ ಅನುಗ್ರಹ ಬೇಡುತ್ತಾರೆ. ಕಂಕನಾಡಿ ಗರೋಡಿಯ ವರ್ಷಾವಧಿ ಜಾತ್ರಾ ಮಹೋತ್ಸವ ಡಿಸೆಂಬರ್ 29,2020ರಂದು ಆರಂಭಗೊಂಡು ಜನವರಿ 2,2021ರಂದು ಕೊನೆಗೊಳ್ಳಲಿದೆ. ಈ ನಾಲ್ಕು ದಿನಗಳು ಭಕ್ತರ ಪಾಲಿಗೆ ವಿಶೇಷ ದಿನಗಳಾಗಿರುತ್ತವೆ. ಎಲ್ಲೆಲ್ಲಿ ಕೇಳಿದರೂ ಗರೋಡಿ ಜಾತ್ರೆ ಬಗ್ಗೆಯೇ ಮಾತನಾಡುತ್ತಿರುತ್ತಾರೆ.

ನಾಲ್ಕು ದಿನಗಳ ಜಾತ್ರೋತ್ಸವದಲ್ಲಿ ಮೊದಲನೇ ದಿನ ಬೈದರ್ಕಳ ದರ್ಶನದ ಬಳಿಕ ಧ್ವಜಾರೋಹಣ ನಡೆಯುತ್ತದೆ. ಎರಡನೇ ದಿನ ವಿಷ್ಣುಮೂರ್ತಿ ದರ್ಶನ, ಮೂರನೇ ದಿನ ಕೊಡಮಣಿತ್ತಾಯ ದೈವದ ನೇಮ, ನಾಲ್ಕನೇ ದಿನ ಬೈದರ್ಕಳ ಜಾತ್ರೆ ಮತ್ತು ರಾತ್ರಿ ದೇಯಿ-ಬೈದೆತಿ ನೇಮೋತ್ಸವ ನಡೆಯುತ್ತದೆ. ಕೊನೆಯ ದಿನ ಮಾಯಂದಾಲ್ ದೈವದ ನೇಮೋತ್ಸವ ನಡೆದು, ಬೈದರ್ಕಳ ದರ್ಶನವಾಗಿ ಧ್ವಜಾರೋಹಣ ನಡೆಯುತ್ತದೆ. ತುಳುನಾಡಿನ ಎಲ್ಲಾ ದೈವಗಳ ನೇಮೋತ್ಸವದ ಹಾಗೆ ಇಲ್ಲಿಯೂ ಕೋಳಿ ಅಂಕಕ್ಕೆ ಪ್ರಾಧಾನ್ಯತೆ ಇದ್ದು, ಇದನ್ನು `ರಕ್ತತರ್ಪಣ’ ಎಂದು ಹೇಳಲಾಗುತ್ತದೆ. ಈ ಕೋಳಿ ಅಂಕವನ್ನು ಖಾತ್ರಿ ಪಡಿಸಲೆಂದೇ ದೈವಸ್ಥಾನದ ಧ್ವಜಾರೋಹಣಕ್ಕೆ ಒಂಭತ್ತು ದಿನಗಳ ಮೊದಲೇ ಶಾಸ್ತ್ರೋಕ್ತವಾಗಿ `ಕೋರಿ ಗೂಂಟ’ ಅಂದರೆ ಕೋಳಿಯನ್ನು ಅಂಕಕ್ಕಾಗಿ ಕಟ್ಟಿ ಹಾಕುವ ಕ್ರಮ ನೆರವೇರಿಸಲಾಗುತ್ತದೆ. ಈ ಕಾರ್ಯವು ಡಿಸೆಂಬರ್ 20ರಂದು ನಡೆದಿದೆ.

ಗರೋಡಿಗಳ ಪ್ರಾಮುಖ್ಯತೆ
ಗರಡಿ ಅಂದರೆ ಇಂದಿನ ಕಾಲದಲ್ಲಿ ಜಿಮ್ ( Gym ) ಎಂದು ಮಾರ್ಪಾಟುಗೊಂಡ ವ್ಯಾಯಾಮ ಶಾಲೆಗಳು. ಇತಿಹಾಸದ ಪ್ರಕಾರ ಕೋಟಿ-ಚೆನ್ನಯರು ದಿನನಿತ್ಯ ವ್ಯಾಯಾಮ ಮಾಡುತ್ತಿದ್ದಂತೆಯೇ ಇತರರೂ ತಮ್ಮ ಶಕ್ತಿಯನ್ನು ಬಲಿಷ್ಠಗೊಳಿಸಲು ಗರೋಡಿಗಳಲ್ಲಿ ವ್ಯಾಯಾಮ ನಡೆಸುತ್ತಿದ್ದರು. ಅಂದಿನ ಕಾಲದ ಗರೋಡಿಗಳ ಪರಂಪರೆಯನ್ನೇ ಮುಂದುವರೆಸಿಕೊಂಡು ಬಂದ ವ್ಯಾಯಾಮ ಶಾಲೆಗಳನ್ನು `ಗೋಧ’ ಎಂದು ಕರೆಯಲಾಗುತ್ತಿದೆ. ವಿನೂತನ ವ್ಯಾಯಾಮ ಸಾಧನಗಳ ಆವಿಷ್ಕಾರದ ಜಿಮ್ನಾಷಿಯಂಗಳ ಕಾರಣ ಗೋಧಗಳು ಮರೆಯಾಗುತ್ತಿವೆ. ಗೋಧಗಳಲ್ಲಿ ಶಕ್ತಿ ಪುರುಷರಾದ ಕೋಟಿ-ಚೆನ್ನಯರ ಮತ್ತು ಅವರ ಆರಾಧ್ಯ ದೈವ ಬ್ರಹ್ಮ ಬೈದರ್ಕಳರ ಆರಾಧನೆ ಖಂಡಿತಾ ಇರುತ್ತದೆ.

ಆರಾಧ್ಯ ದೈವ ಬ್ರಹ್ಮ ಬೈದರ್ಕಳ
ಕೋಟಿ-ಚೆನ್ನಯ ಸಹೋದರರು ಎಂದಿಗೂ ತಮ್ಮ ಆರಾಧ್ಯ ದೈವಗಳ ಮುಂದೆ ನಮಿಸದೇ ತಮ್ಮ ದಿನ ಮುಂದುವರೆಸಿದವರಲ್ಲ ಎಂದು ತುಳುನಾಡಿನ ಪಾಡ್ದನಗಳು ಇತಿಹಾಸ ಹೇಳುತ್ತವೆ. ಅವರು ತಮ್ಮೊಳಗಿನ ಶಕ್ತಿಯೇ ಬೈದರ್ಕಳ ಎಂದು ನಂಬಿದ್ದರು ಎನ್ನಲಾಗುತ್ತದೆ.
ಹಾಗಾಗಿ ದೈಹಿಕವಾಗಿ ಬಲಾಢ್ಯರು ಮತ್ತು ಕಡಿಮೆ ಶಕ್ತಿಯುಳ್ಳವರೂ ಗರೋಡಿಯಲ್ಲಿ ಬೇಡಿದಾಗ ವಿಶೇಷವಾಗಿ ಧೈರ್ಯ ಬರುತ್ತದೆ ಎನ್ನುವುದು ನಂಬಿಕೆ. ಹೀಗೆ ಪ್ರತಿನಿತ್ಯ ಬಹುತೇಕ ಭಕ್ತರು ಧೈರ್ಯವನ್ನು ಬೇಡುತ್ತಾರೆ. ಇದರಿಂದಾಗಿ ಮಾನಸಿಕವಾಗಿ ತಾವು ಕೈಗೆತ್ತಿಕೊಂಡ ಕಾರ್ಯವು ಕೋಟಿ-ಚೆನ್ನಯರ ಅಭಯದಿಂದ ಯಶಸ್ಸು ಕಾಣುತ್ತದೆ ಎನ್ನುವುದು ಭಕ್ತರ ಅನುಭವದ ಮಾತಾಗಿದೆ. ವರ್ಷಾವಧಿ ಉತ್ಸವದಲ್ಲಿ ಪಾಲುಗೊಂಡಾಗ ಸಾಕ್ಷಾತ್ ಕೋಟಿ-ಚೆನ್ನಯರ ದರ್ಶನವಾದಂತೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬ ಭಕ್ತರೂ ತಪ್ಪದೇ ವರ್ಷಾವಧಿ ಉತ್ಸವದಲ್ಲಿ ಪಾಲುಗೊಳ್ಳುತ್ತಾರೆ. ಇದರಿಂದಾಗಿ ಕಂಕನಾಡಿ ಗರೋಡಿ ಬ್ರಹ್ಮಬೈದರ್ಕಳ ನೇಮೋತ್ಸವ ಮತ್ತು ಜಾತ್ರೆಗೆ ವಿಶೇಷ ಮಹತ್ವವಿದೆ. ಒಂದು ಬಾರಿ ಈ ನೇಮೋತ್ಸವದಲ್ಲಿ ಪಾಲುಗೊಂಡವರು ಮತ್ತೆ ಮುಂದಿನ ವರ್ಷಕ್ಕೆ ಕಾಯುತ್ತಿರುವುದಂತೂ ಸುಳ್ಳಲ್ಲ.