ಬೆಂಗಳೂರು(ಜ.11): ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುವುದು ಗ್ಯಾರಂಟಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ಪಕ್ಷದ ವರಿಷ್ಠರು ದಿಢೀರನೆ ದೆಹಲಿಗೆ ಕರೆಸಿಕೊಂಡು ಸುದೀರ್ಘ ಸಮಾಲೋಚನೆ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಈ ಮಾತು ಹೇಳಿರುವುದು ಸಾಕಷ್ಟುಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾನುವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸೋದು ಪಕ್ಕಾ. ಆದರೆ ಯಾವಾಗ ಎನ್ನುವುದನ್ನು ಯಡಿಯೂರಪ್ಪನವರೇ ಹೇಳಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು.

ಸಿದ್ದರಾಮಯ್ಯ ಅವರು ಈ ರೀತಿ ಹೇಳುವುದಕ್ಕೆ ಕಾರಣವೂ ಇದೆ. ಈ ಹಿಂದೆ ಎರಡು ಬಾರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗಿರಲಿಲ್ಲ.

ಸಾಮಾನ್ಯವಾಗಿ ಸಂಪುಟ ಕುರಿತಂತೆ ಮಾತ್ರ ಮಾತುಕತೆ ನಡೆದಿದ್ದರೆ ಅದು ಒಂದೂವರೆ ಗಂಟೆಗಳ ಕಾಲ ಸುದೀರ್ಘ ಅವಧಿ ತೆಗೆದುಕೊಳ್ಳುತ್ತಿರಲಿಲ್ಲ. ಅಲ್ಲದೆ, ಅಮಿತ್‌ ಶಾ ಅವರು ತಾವೊಬ್ಬರೇ ಮಾತುಕತೆ ನಡೆಸಲಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನೂ ಕರೆಸಿಕೊಂಡಿದ್ದರು.

ಹೀಗಾಗಿ, ವರಿಷ್ಠರೊಂದಿಗಿನ ಯಡಿಯೂರಪ್ಪ ಅವರ ಸಭೆಯ ಹಿಂದೆ ನಾಯಕತ್ವ ಬದಲಾವಣೆಯ ಸಾಧ್ಯತೆಯಿದೆ ಎಂಬ ಗುಸು ಗುಸು ಮಾತು ಬಲವಾಗಿ ಕೇಳಿಬಂತು. ರಾಜ್ಯ ರಾಜಕಾರಣದಲ್ಲೂ ಮಿಂಚಿನ ಸಂಚಲನ ಉಂಟು ಮಾಡಿತು. ಬಳಿಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಪಕ್ಕಾ ಎಂಬ ಮಾತನ್ನು ಹೇಳಿದರು.

LEAVE A REPLY

Please enter your comment!
Please enter your name here