ನವದೆಹಲಿ(13-01-2021): ಕೃಷಿ ಕಾನೂನಿನ ಪರವಾಗಿದ್ದವರೇ ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯಲ್ಲಿದ್ದಾರೆಂಬ ಆರೋಪ ಕೇಳಿಬಂದಿದೆ.
ಕೃಷಿ ಕಾಯ್ದೆಗಳ ಜಾರಿಗೆ ತಾತ್ಕಾಲಿಕವಾಗಿ ತಡೆ ನೀಡಿದ ಸುಪ್ರೀಂ ಕೋರ್ಟ್, ರೈತರ ಆಕ್ಷೇಪಗಳನ್ನು ಆಲಿಸಲು ನಾಲ್ವರ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಆದರೆ ಸಮಿತಿಯಲ್ಲಿನ ನಾಲ್ವರು ಸದಸ್ಯರು ಕೂಡ ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳ ಸಮರ್ಥಕರಾಗಿದ್ದಾರೆ ಎನ್ನುವುದು ವಿಪರ್ಯಾಸವಾಗಿದೆ.
ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯಲ್ಲಿ ಭೂಪಿಂದರ್ ಸಿಂಗ್ ಮಾನ್, ಡಾ. ಪ್ರಮೋದ್ ಕುಮಾರ್ ಜೋಷಿ, ಅಶೋಕ್ ಗುಲಾಟಿ, ಮತ್ತು ಅನಿಲ್ ಘನ್ವತ್ ಇದ್ದು ಇವರೆಲ್ಲರೂ ಈಗಾಗಲೇ ಒಂದಲ್ಲ ಒಂದು ರೀತಿಯಲ್ಲಿ ಕಾಯ್ದೆಯ ಪರವಾಗಿ ಲೇಖನಗಳನ್ನು ಬರೆದಿದ್ದರು, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇವರ ಹೇಳಿಕೆಗಳು, ಲೇಖನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ನಾವು ಈ ಸಮಿತಿಯನ್ನು ಸ್ವೀಕರಿಸುವುದಿಲ್ಲ, ಈ ಸಮಿತಿಯ ಎಲ್ಲ ಸದಸ್ಯರು ಸರ್ಕಾರದ ಪರವಾಗಿದ್ದಾರೆ ಮತ್ತು ಈ ಸದಸ್ಯರು ಕಾನೂನುಗಳನ್ನು ಸಮರ್ಥಿಸುತ್ತಿದ್ದಾರೆ ಎಂದು ಪಂಜಾಬ್ ರೈತ ಸಂಘಗಳು ತಿಳಿಸಿವೆ.